ರಫೇಲ್ ವಿಮಾನಕ್ಕೂ ಧಾರ್ಮಿಕ ನಂಟು ಕಲ್ಪಿಸುವುದೇಕೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ಆಕ್ರೋಶ

Update: 2019-10-09 07:54 GMT

ಹೊಸದಿಲ್ಲಿ, ಅ.9: ಭಾರತದ ವಾಯುಪಡೆಯ ವೈಮಾನಿಕ ಯುದ್ಧ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲು ಸಹಕಾರಿಯಾಗುವ ಮೊಟ್ಟಮೊದಲ ರಫೇಲ್ ಯುದ್ಧ ವಿಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಅಧಿಕೃತವಾಗಿ ಫ್ರಾನ್ಸ್ ನಿಂದ ಸ್ವೀಕರಿಸಿದ್ದಾರೆ.

ಪ್ರಾಯೋಗಿಕ ಹಾರಾಟಕ್ಕಿಂತ ಮೊದಲು ಯುದ್ಧ ವಿಮಾನದ ಮೇಲೆ ‘ಓಂ’ ಎಂದು ಬರೆದು ನಂತರ ತೆಂಗಿನಕಾಯಿ, ಹೂವುಗಳನ್ನು ಇರಿಸಿ  ಅದಕ್ಕೆ ಆಯುಧಪೂಜೆ ನಡೆಸಿರುವುದನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.

ರಫೇಲ್ ಹಸ್ತಾಂತರವನ್ನೂ ನರೇಂದ್ರ ಮೋದಿ ಸರಕಾರ ಕೇಸರೀಕರಣಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್  ಟೀಕಿಸಿದ್ದಾರೆ.

“ವಿಜಯದಶಮಿ ಹಾಗೂ ರಫೇಲ್ ಯುದ್ಧ ವಿಮಾನ ಹಸ್ತಾಂತರದ ನಡುವಿನ ಧಾರ್ಮಿಕ ಸಂಬಂಧ ಹೊಂದಾಣಿಕೆಯಾಗುವುದಿಲ್ಲ. ನಾವೆಲ್ಲರೂ ಆಚರಿಸುವ ಹಬ್ಬಕ್ಕೆ ರಫೇಲ್ ಜತೆ ಏಕೆ ನಂಟು ಕಲ್ಪಿಸಬೇಕು?'' ಎಂದು ಸಂದೀಪ್ ದೀಕ್ಷಿತ್ ಪ್ರಶ್ನಿಸಿದ್ದಾರೆ.

``ರಕ್ಷಣಾ ಸಚಿವರ ಬದಲು ರಕ್ಷಣಾ ಪಡೆಗಳು ಈ ಯುದ್ಧ ವಿಮಾನವನ್ನು ಪಡೆಯಬೇಕಿತ್ತು. ಈ ಸರಕಾರದ ಸಮಸ್ಯೆಯೇ ಇದು. ಯಾವುದೇ ಮಹತ್ತರ ಕಾರ್ಯ ಸಾಧಿಸದೇ ಇದ್ದರೂ ಎಲ್ಲದರಲ್ಲಿ ನಾಟಕೀಯತೆ ತರುತ್ತಾರೆ'' ಎಂದು ದೀಕ್ಷಿತ್ ಹೇಳಿದ್ದಾರೆ.

ಇತ್ತೀಚೆಗೆ ಎಎಪಿಯಿಂದ ಕಾಂಗ್ರೆಸ್ ಪಕ್ಷ ಸೆರಿರುವ ಅಲ್ಕಾ ಲಾಂಬ ಅವರು ರಫೇಲ್ ಯುದ್ಧ ವಿಮಾನದ ಚಕ್ರದಡಿಯಲ್ಲಿ ಇರಿಸಲಾಗಿದ್ದ ಎರಡು ನಿಂಬೆ ಹಣ್ಣುಗಳ ಫೋಟೋ ಟ್ವೀಟ್ ಮಾಡಿ “ಫ್ರಾನ್ಸ್ ತಯಾರಿತ ರಫೇಲ್ ಇನ್ನೂ ಭಾರತಕ್ಕೆ ತಲುಪಿಲ್ಲ, ಆದರೆ ಅದಾಗಲೇ ಅದು ಎರಡು ಹಸಿರು ನಿಂಬೆ ಹಣ್ಣುಗಳನ್ನು ತನ್ನ ಚಕ್ರದಡಿ   ಜಜ್ಜಿ ಮೊದಲ ಯಶಸ್ಸು ಸಾಧಿಸಿ ದೇಶವನ್ನು  ಕೆಟ್ಟ ದೃಷ್ಟಿಯಿಂದ ರಕ್ಷಿಸಿದೆ'' ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

“ಮಾಜಿ ರಕ್ಷಣಾ ಸಚಿವ ಎ ಕೆ ಆ್ಯಂಟನಿ ಅಥವಾ ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಆಗಿದ್ದರೆ ಅವರು ಬೈಬಲ್ ಅಥವಾ ಕುರ್ ಆನ್ ಕೊಂಡುಹೋಗುತ್ತಿದ್ದರೇ ?'' ಎಂದೂ ಅಲ್ಕಾ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News