ಅಕ್ಟೋಬರ್ 10ರಂದು 2,000 ರೂ. ನೋಟು ರದ್ದಾಗಲಿದೆಯೇ?

Update: 2019-10-09 08:03 GMT

ಹೊಸದಿಲ್ಲಿ, ಅ.9: ಅಕ್ಟೋಬರ್ 10ರಿಂದ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು  ರದ್ದುಗೊಳಿಸಲಾಗುವುದೆಂಬ ಸಂದೇಶವೊಂದು ವಾಟ್ಸ್ಯಾಪ್ ಗಳಲ್ಲಿ ಹರಿದಾಡುತ್ತಿದೆ. ಹಲವರು ಈ ಸಂದೇಶವನ್ನು ನಂಬಿ ಚಿಂತಾಕ್ರಾಂತರಾಗಿದ್ದಾರೆ. ಈ ಸಂದೇಶದ ಸತ್ಯಾಂಶ ಈ ಕೆಳಗಿದೆ.

‘ಗ್ರಾಹಕರು ವಿದ್ ಡ್ರಾ ಮಾಡಬಹುದಾದ ನಗದಿನ ಮೇಲಿನ ಮಿತಿಯನ್ನು ಹತ್ತು ದಿನಗಳಲ್ಲಿ50,000 ರೂ.ಗೆ ನಿಗದಿಪಡಿಸಲಾಗುವುದು  ಹಾಗೂ ಜನರು ತಮ್ಮ 2000 ರೂ. ಮುಖಬೆಲೆಯ ನೋಟುಗಳನ್ನು ಆದಷ್ಟು ಬೇಗ ಬದಲಾಯಿಸಬೇಕೆಂದೂ’ ಈ ಸಂದೇಶದಲ್ಲಿ ಹೇಳಲಾಗಿದೆ. ಹೊಸ ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ಹೊರತರಲಾಗುವುದರಿಂದ ಈ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಲಾಗುವುದು ಎಂದೂ ಸಂದೇಶದಲ್ಲಿ ಹೇಳಲಾಗಿದೆ. ಆದರೆ ಈ ಸಂದೇಶ ಸುಳ್ಳು ಎಂದು www.boomlive.in  ವರದಿ ಮಾಡಿದೆ.

ಹಲವಾರು ಮಂದಿ ಈ ಸುಳ್ಳು ಸಂದೇಶವನ್ನು ನಿಜವೆಂದೇ ನಂಬಿ ಬಿಟ್ಟಿದ್ದಾರೆ. ಆದರೆ ಈ ಕುರಿತು www.boomlive.in ಆರ್‍ ಬಿಐ ವಕ್ತಾರರನ್ನು ಸಂಪರ್ಕಿಸಿದಾಗ ರಿಸರ್ವ್ ಬ್ಯಾಂಕ್ ಇಂತಹ ಆದೇಶ ನೀಡಿಲ್ಲ, ಇದು ತಪ್ಪು ಎಂದಿದ್ದಾರೆ.

ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ನವೆಂಬರ್ 8, 2016ರಂದು ಜಾರಿಗೊಳಿಸಲಾದ ನೋಟು ಅಮಾನ್ಯೀಕರಣದ ನಂತರ ಚಲಾವಣೆಗೆ ತರಲಾಗಿತ್ತು.

ರಿಸರ್ವ್ ಬ್ಯಾಂಕಿನ 2019 ವಾರ್ಷಿಕ ವರದಿಯ ಪ್ರಕಾರ ದೇಶದಲ್ಲಿ ಒಟ್ಟು ಚಲಾವಣೆಯಲ್ಲಿರುವ ನೋಟುಗಳ  ಪೈಕಿ  2000 ರೂ. ನೋಟುಗಳ ಪ್ರಮಾಣ ಶೇ.3ರಷ್ಟಿದ್ದರೆ, ಒಟ್ಟು ನೋಟುಗಳ ಮೌಲ್ಯದ ಪೈಕಿ ಚಲಾವಣೆಯಲ್ಲಿರುವ 2,000 ನೋಟುಗಳ ಒಟ್ಟು ಮೌಲ್ಯ ಶೇ 31.2ರಷ್ಟಿದೆ. ಆದರೆ 2017ರಲ್ಲಿ ಈ ಪ್ರಮಾಣ ಶೇ.3 ಹಾಗೂ ಶೇ. 50.2ರಷ್ಟಿತ್ತು.

ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್ ಹಗರಣದ ನಂತರ ಬ್ಯಾಂಕುಗಳ ಕುರಿತಂತೆ ಹಲವು ನಕಲಿ ಸಂದೇಶಗಳು ಹರಿದಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News