ತನ್ನ ಪ್ರಾಣವನ್ನು ಲೆಕ್ಕಿಸದೆ ಚಿರತೆ ದಾಳಿಯಿಂದ ತಮ್ಮನನ್ನು ರಕ್ಷಿಸಿದ 11 ವರ್ಷದ ಬಾಲಕಿ

Update: 2019-10-09 11:23 GMT

ಪೌರಿ, ಅ.9: 11 ವರ್ಷದ ಬಾಲಕಿ ತನ್ನ ನಾಲ್ಕು ವರ್ಷದ ಸಹೋದರನನ್ನು ಚಿರತೆ ದಾಳಿಯಿಂದ ರಕ್ಷಿಸಿದ ಘಟನೆ ಉತ್ತರಾಖಂಡದ ಪೌರಿ ಜಿಲ್ಲೆಯ ದೇವಕುಂಡೈ ತಲ್ಲಿ ಎಂಬ ಗ್ರಾಮದಲ್ಲಿ ನಡೆದಿದೆ.

ರಾಖಿ ಎಂಬ ಬಾಲಕಿ ತನ್ನ ನಾಲ್ಕು ವರ್ಷದ ಸೋದರನ ಜತೆ ಆಟವಾಡುತ್ತಿದ್ದಾಗ ಚಿರತೆಯೊಂದು ಅವರ ಮೇಲೆ ದಾಳಿ ನಡೆಸಿತ್ತು. ಆಗ ತನ್ನ ತಮ್ಮನನ್ನು ಚಿರತೆಯಿಂದ ರಕ್ಷಿಸಲು ಆಕೆ ಆತನ ಮೇಲೆ ಅಂಗಾತ ಮಲಗಿ ಬಿಟ್ಟಿದ್ದಳು. ಬಾಲಕನಿಗೆ ಹೆಚ್ಚಿನ ಗಾಯಗಳುಂಟಾಗದೇ ಇದ್ದರೂ ಬಾಲಕಿಯ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ.

ಬೊಬ್ಬೆ ಕೇಳಿ ಗ್ರಾಮಸ್ಥರು ಧಾವಿಸಿ ಬಂದ ನಂತರ ಚಿರತೆ ಅಲ್ಲಿಂದ ಪರಾರಿಯಾಗಿದೆ.  ಬಾಲಕಿಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಶಿಫಾರಸಿನಂತೆ ಆಕೆಯ ಹೆತ್ತವರು ಆಕೆಯನ್ನು ದಿಲ್ಲಿ ಸರಕಾರಿ ಆಸ್ಪತ್ರೆಗೆ  ದಾಖಲಿಸಲು ಯತ್ನಿಸಿದರೂ ಅಲ್ಲಿ ಸಾಧ್ಯವಾಗಿರಲಿಲ್ಲ. ಕೊನೆಗೆ ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಹಾಗೂ ಸ್ಥಳೀಯ ಶಾಸಕ ಸತ್ಪಾಲ್ ಮಹರಾಜ್  ಅವರ ಮಧ್ಯ ಪ್ರವೇಶದಿಂದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಆಕೆಯನ್ನು ಅಕ್ಟೋಬರ್ 7ರಂದು ದಾಖಲಿಸಲಾಗಿದ್ದು, ಆಕೆ ಈಗ ಅಪಾಯದಿಂದ ಪಾರಾಗಿದ್ದಾಳೆ. ತಕ್ಷಣದ ಪರಿಹಾರವಾಗಿ ಕುಟುಂಬಕ್ಕೆ ಒಂದು ಲಕ್ಷ ಧನಸಹಾಯವನ್ನೂ ಸಚಿವರು ಒದಗಿಸಿದರು.

ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಬಾಲಕಿಯ ಕುಟುಂಬ ಸದಸ್ಯರ ಜತೆ ದೂರವಾಣಿ ಮೂಲಕ ಮಾತನಾಡಿ ಆಕೆಯ ಧೈರ್ಯವನ್ನು ಹೊಗಳಿ ಸಾಧ್ಯವಿರುವ ಎಲ್ಲಾ  ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಬಾಲಕಿಯ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ಪೌರಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News