×
Ad

ಎಚ್ಚರಿಕೆ,ಆನ್‌ಲೈನ್‌ ಬ್ಯಾಂಕ್ ಹೆಸರಲ್ಲಿ ನಡೆಯುತ್ತಿದೆ ಭಾರೀ ವಂಚನೆ

Update: 2019-10-09 21:54 IST

ಕಳೆದ ಕೆಲವು ತಿಂಗಳುಗಳಿಂದ ಆನ್‌ಲೈನ್‌ನಲ್ಲಿ ಇನ್ನೊಂದು ವಂಚನೆ ತಂತ್ರವು ಹರಿದಾಡುತ್ತಿದೆ. ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ವಂಚಕರು ತಾವು ಕುಳಿತಲ್ಲಿಂದಲೇ ಆ್ಯಪ್‌ವೊಂದರ ಮೂಲಕ ಜನರ ಮೊಬೈಲ್ ಫೋನ್ ಸ್ಕ್ರೀನ್‌ಗಳನ್ನು ಪ್ರವೇಶಿಸಿ ಅವರನ್ನು ವಂಚಿಸುತ್ತಿದ್ದಾರೆ. ಅವರು ತಮ್ಮ ಬಲಿಪಶುವಿಗೆ ಕರೆಯನ್ನು ಮಾಡಿ ಆತನ/ಆಕೆಯ ಕೆವೈಸಿಯನ್ನು ದೃಢೀಕರಿಸುವ ಅಗತ್ಯವಿದೆ ಎಂದು ನಂಬಿಸುತ್ತಾರೆ,ಆನ್‌ಲೈನ್‌ನಲ್ಲಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೆರವಾಗುವುದಾಗಿ ಹೇಳಿ ಬಳಿಕ ಆತನ/ಆಕೆಯ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ.

ಕಳೆದ ಜುಲೈನಲ್ಲಿ ಇಂದೋರಿನ ಸಂದೀಪ್ ಚೌಬೆ ಎನ್ನುವವರಿಗೆ ಕರೆಯೊಂದು ಬಂದಿದ್ದು,ಕರೆ ಮಾಡಿದ್ದ ವ್ಯಕ್ತಿ ತಾನು ಆನ್‌ಲೈನ್ ಫುಡ್ ಆರ್ಡರಿಂಗ್ ಕಂಪನಿಯೊಂದರ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಎಂದು ಪರಿಚಯಿಸಿಕೊಂಡಿದ್ದ. ಇಲ್ಲಿ ವಂಚನೆಗೆ ಸಿಲುಕಿದ ಚೌಬೆ 2.28ಲ.ರೂಗಳನ್ನು ಕಳೆದುಕೊಂಡಿದ್ದರೆ,ಮುಂಬೈನ ಧನಂಜಯ ಜೋಶಿ ಎನ್ನುವವರು ತನ್ನ ಕೆವೈಸಿಯನ್ನು ಪೂರ್ಣಗೊಳಿಸಲು ವಂಚಕ ತಿಳಿಸಿದಂತೆ ಆ್ಯಪ್‌ವೊಂದನ್ನು ಡೌನ್‌ಲೋಡ್‌ ಮಾಡಿಕೊಂಡು 1.6 ಲ.ರೂ.ಗಳಿಗೆ ಪಂಗನಾಮ ಹಾಕಿಸಿಕೊಂಡಿದ್ದಾರೆ. ಪೊಲೀಸರು ಇವೆರಡೂ ಪ್ರಕರಣಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ವಂಚಕರ ಕಾರ್ಯವಿಧಾನ ಇಲ್ಲಿದೆ,ಇದು ನಿಮಗೂ ತಿಳಿದಿರಲಿ

►ನಿಮ್ಮ ವ್ಯಾಲೆಟ್ ಅಥವಾ ಬ್ಯಾಂಕ್ ಕೆವೈಸಿ ಸಿಂಧುತ್ವವನ್ನು ಕಳೆದುಕೊಂಡಿದೆ ಎಂದು ತಿಳಿಸುವ ಕರೆಯೊಂದು ನಿಮಗೆ ಬರುತ್ತದೆ.

►ನಿಮ್ಮ ಖಾತೆಯನ್ನು ಪುನಃ ಕ್ರಿಯಾಶೀಲವನ್ನಾಗಿಸಲು ಆನ್‌ಲೈನ್‌ನಲ್ಲಿಯೇ ಕೆವೈಸಿಯನ್ನು ದೃಢೀಕರಿಸಬಹುದೆಂದು ವಂಚಕ ನಿಮಗೆ ತಿಳಿಸುತ್ತಾನೆ.

►ನಿಮ್ಮ ಸೂಕ್ತ ಮಾರ್ಗದರ್ಶನಕ್ಕಾಗಿ ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ನಿಮಗೆ ಸೂಚಿಸಲಾಗುತ್ತದೆ.

►ಈ ಆ್ಯಪ್‌ನ್ನು ನೀವು ಬಳಸಿದಾಗ ನಿಮಗೆ ಕರೆ ಮಾಡಿದ ವ್ಯಕ್ತಿ ಕುಳಿತಲ್ಲಿಂದಲೇ ನಿಮ್ಮ ಫೋನಿನ ಸ್ಕ್ರೀನ್‌ನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

► ಸಣ್ಣ ಸಾಂಕೇತಿಕ ಮೊತ್ತವೊಂದನ್ನು ನಿಮ್ಮ ವ್ಯಾಲೆಟ್‌ಗೆ ವರ್ಗಾಯಿಸುವಂತೆ ಆತ ನಿಮ್ಮನ್ನು ಕೇಳಿಕೊಳ್ಳುತ್ತಾನೆ.

►ನೀವು ಹಾಗೆ ಮಾಡಿದಾಗ ನಿಮ್ಮ ಪಾಸ್‌ವರ್ಡ್ ಮತ್ತು ಇತರ ವಿವರಗಳನ್ನು ಆತ ನೋಡುತ್ತಾನೆ.

►ಅದನ್ನಾತ ಏಕಕಾಲದಲ್ಲಿ ಬಳಸಿಕೊಂಡು ನಿಮ್ಮ ಬ್ಯಾಂಕ್‌ ಖಾತೆಯಿಂದ ಅಷ್ಟೂ ಹಣವನ್ನು ಎಗರಿಸುತ್ತಾನೆ.

►ನೀವು ಎಲ್ಲ ವರ್ಗಾವಣೆ ಕೋರಿಕೆಗಳಿಗೆ ಒಟಿಪಿ (ಒಂದು ಬಾರಿಯ ಪಾಸ್‌ವರ್ಡ್)ಗಳನ್ನು ಪಡೆದುಕೊಳ್ಳುತ್ತಿರುವಾಗ ವಂಚಕನೂ ಆ್ಯಪ್ ಮೂಲಕ ಅವುಗಳನ್ನು ನೋಡುತ್ತಿರುತ್ತಾನೆ.

►ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ವಂಚಕ ಸ್ವಚ್ಛಗೊಳಿಸಿರುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News