ತಮಿಳುನಾಡಿಗೆ ಸತತ ಏಳನೇ ಜಯ

Update: 2019-10-09 18:14 GMT

ಜೈಪುರ, ಅ.9: ಬಾಬಾ ಅಪರಾಜಿತ್ ಅವರ ಆಲ್‌ರೌಂಡ್ ಪ್ರದರ್ಶನದ(ಔಟಾಗದೆ 111 ರನ್, 30ಕ್ಕೆ 4 ವಿಕೆಟ್)ಸಹಾಯದಿಂದ ತಮಿಳುನಾಡು ತಂಡ ರೈಲ್ವೇಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿತು. ಈ ಮೂಲಕ ವಿಜಯ ಹಝಾರೆ ಟ್ರೋಫಿಯ ‘ಸಿ’ ಗುಂಪಿನ ಪಂದ್ಯದಲ್ಲಿ ಸತತ ಏಳನೇ ಜಯ ದಾಖಲಿಸಿತು.

 ತಮಿಳುನಾಡು ತಂಡ 7 ಪಂದ್ಯಗಳಲ್ಲಿ 28 ಅಂಕವನ್ನು ಗಳಿಸಿ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ನಾಕೌಟ್ ಹಂತಕ್ಕೆ ಹೆಚ್ಚುಕಡಿಮೆ ತನ್ನ ಸ್ಥಾನವನ್ನು ದೃಢಪಡಿಸಿದೆ.ಗುಜರಾತ್ 6 ಪಂದ್ಯಗಳಲ್ಲಿ ಆರಂಕವನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ರೈಲ್ವೇಸ್ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 200 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ತಮಿಳುನಾಡು 44.1 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಶತಕ (111, 124 ಎಸೆತ, 7 ಬೌಂಡರಿ, 1 ಸಿಕ್ಸರ್)ಸಿಡಿಸಿದ ಅಪರಾಜಿತ್ ಆಲ್‌ರೌಂಡರ್ ವಿಜಯ ಶಂಕರ್(72, 113 ಎಸೆತ, 3 ಬೌಂಡರಿ, 1 ಸಿಕ್ಸರ್)ಅವರೊಂದಿಗೆ ಮೂರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 186 ರನ್ ಕಲೆ ಹಾಕಿದರು.

ಇದಕ್ಕೂ ಮೊದಲು ಮನೀಶ್ ರಾವ್(55, 85 ಎಸೆತ, 4 ಬೌಂಡರಿ) ಹಾಗೂ ಪ್ರಥಮ್ ಸಿಂಗ್(43, 56 ಎಸೆತ, 5 ಬೌಂಡರಿ,1 ಸಿಕ್ಸರ್)ಉತ್ತಮ ಬ್ಯಾಟಿಂಗ್ ನಡೆಸಿ ರೈಲ್ವೇಸ್ ತಂಡ ನಿಗದಿತ 50 ಓವರ್‌ಗಳಲ್ಲಿ ಬರೋಬ್ಬರಿ 200 ರನ್ ಗಳಿಸಲು ನೆರವಾದರು.

ಕೇವಲ 30 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ ಅಪರಾಜಿತ್ ರೈಲ್ವೇಸ್ ಹಳಿ ತಪ್ಪಿಸಿದರು. ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದ ರೈಲ್ವೇಸ್ 7 ಓವರ್‌ಗಳ ಅಂತರದಲ್ಲಿ 180 ರನ್‌ಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಚೇಸಿಂಗ್‌ನ ವೇಳೆ ತಮಿಳುನಾಡಿನ ಆರಂಭ ಉತ್ತಮವಾಗಿರಲಿಲ್ಲ. ಫಾರ್ಮ್ ನಲ್ಲಿದ್ದ ಬ್ಯಾಟ್ಸ್‌ಮನ್ ಅಭಿನವ್ ಮುಕುಂದ್ 11 ರನ್‌ಗೆ ವಿಕೆಟ್ ಒಪ್ಪಿಸಿದರು. ಮುಕುಂದ್, ಅನಂತ ಸಹಾಗೆ ರಿಟರ್ನ್ ಕ್ಯಾಚ್ ನೀಡಿದರೆ, ಇನ್ನೋರ್ವ ಆರಂಭಿಕ ಆಟಗಾರ ಮುರಳಿ ವಿಜಯ್ ಕೇವಲ 6 ರನ್ ಗಳಿಸಿ ರನೌಟಾದರು. ಆಗ ಜೊತೆಯಾದ ಅಪರಾಜಿತ್ ಹಾಗೂ ಶಂಕರ್ ಮರಳಿ ಹೋರಾಟ ನೀಡುವ ಮೂಲಕ ರೈಲ್ವೇಸ್ ಜಯದ ವಿಶ್ವಾಸಕ್ಕೆ ಧಕ್ಕೆ ತಂದರು.

 ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಅಪರಾಜಿತ್ ತನ್ನ ನಾಲ್ಕು ಅರ್ಧಶತಕಗಳಿಗೆ ಶತಕವನ್ನು ಸೇರಿಸಿದರು. ರೈಲ್ವೇಸ್ ನಾಯಕ ಅರಿಂದಮ್ ಸಿಂಗ್, ಅಪರಾಜಿತ್ ಹಾಗೂ ಶಂಕರ್ ಜೋಡಿಯನ್ನು ಬೇರ್ಪಡಿಸಲು 8 ಬೌಲರ್‌ಗಳನ್ನು ದಾಳಿಗಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ತಮಿಳುನಾಡು ತಂಡ 45ನೇ ಓವರ್‌ನಲ್ಲಿ ಗೆಲುವಿನ ದಡ ಸೇರಿತು. ಇನ್ನುಳಿದ ಪಂದ್ಯಗಳಲ್ಲಿ ರಾಜಸ್ಥಾನ ತಂಡ ಸರ್ವಿಸಸ್ ತಂಡವನ್ನು ಸೋಲಿಸಿತು. ಇದು ರಾಜಸ್ಥಾನದ ಮೊದಲ ಗೆಲುವಾಗಿದೆ. ಬಂಗಾಳ ತಂಡ ತ್ರಿಪುರಾವನ್ನು 5 ವಿಕೆಟ್‌ಗಳಿಂದ ಮಣಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News