ನೇಪಾಳದ ವಿರುದ್ಧ ಭಾರತಕ್ಕೆ 4-1 ಭರ್ಜರಿ ಜಯ

Update: 2019-10-09 18:26 GMT

ಥಿಂಪು, ಅ.9: ಭೂತಾನ್‌ನ ಥಿಂಪು ನಗರದಲ್ಲಿ ಆರಂಭವಾಗಿರುವ 15ರ ಕೆಳಹರೆಯದ ಮಹಿಳೆಯರ ದಕ್ಷಿಣ ಏಶ್ಯಾ ಫುಟ್ಬಾಲ್ ಚಾಂಪಿಯನ್‌ಶಿಪ್(ಸ್ಯಾಫ್)ನ ಆರಂಭಿಕ ಪಂದ್ಯದಲ್ಲಿ ಬುಧವಾರ ಭಾರತದ ಮಹಿಳೆಯರು ನೇಪಾಳದ ವಿರುದ್ಧ 4-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ. ಭಾರತದ ಪರ ಲಿಂಡಾ ಕೋಮ್ ಸೆರ್ತೊ (38 ಮತ್ತು 56ನೇ ನಿಮಿಷ) ಅವಳಿ ಗೋಲು, ಸುಮತಿ ಕುಮಾರಿ (7ನೇ ನಿಮಿಷ) ಮತ್ತು ಪ್ರಿಯಾಂಕಾ ಸುಜೇಷ್ (66ನೇ ನಿಮಿಷ)ತಲಾ1 ಗೋಲು ದಾಖಲಿಸಿದರು. ನೇಪಾಳದ ಮನ್‌ಮಾಯಾ ದಮಾಯಿ 62ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿ ಸೋಲಿನ ಅಂತರವನ್ನು ಕುಗ್ಗಿಸಿದರು. ಪಂದ್ಯದ ಆರನೇ ನಿಮಿಷದಲ್ಲಿ ದೊರೆತ ಅವಕಾಶವನ್ನು ಬಳಸಿಕೊಂಡ ಸುಮತಿ ಕುಮಾರಿ ನೇಪಾಳದ ರಕ್ಷಣಾ ಪಂಕ್ತಿಯನ್ನು ವಂಚಿಸಿ ಗೋಲು ದಾಖಲಿಸಲು ಸಫಲರಾದರು. 38ನೇ ನಿಮಿಷದಲ್ಲಿ ಮತ್ತೆ ನೇಪಾಳದ ರಕ್ಷಣಾ ಪಂಕ್ತಿಯನ್ನು ದಾಟಿ ಮುನ್ನಡೆದ ಸುಮತಿ ಕುಮಾರಿ ಈ ಬಾರಿ ಲಿಂಡಾಗೆ ಪಾಸ್ ನೀಡಿದ್ದು ಲಿಂಡಾ ಗುರಿ ತಪ್ಪಲಿಲ್ಲ. ಪ್ರಥಮಾರ್ಧದಲ್ಲಿ ಭಾರತ 2-0 ಗೋಲುಗಳ ಮುನ್ನಡೆ ಪಡೆಯಿತು.

ದ್ವಿತೀಯಾರ್ಧದಲ್ಲಿ ಮತ್ತೆ ಸುಮತಿಯಿಂದ ದೊರೆತ ಉತ್ತಮ ಪಾಸ್ ಅನ್ನು ಸದುಪಯೋಗಪಡಿಸಿಕೊಂಡ ಲಿಂಡಾ ನೇಪಾಳದ ಗೋಲ್‌ಕೀಪರ್ ಅನ್ನು ವಂಚಿಸಿ ಗುರಿ ಮುಟ್ಟಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ಮನ್‌ಮಾಯಾ ದಮಾಯಿ ನೇಪಾಳದ ಪರ ಗೋಲು ದಾಖಲಿಸಿದರು. ಬದಲಿ ಆಟಗಾರ್ತಿಯಾಗಿ ಕಣಕ್ಕಿಳಿದ ಪ್ರಿಯಾಂಕಾ 66ನೇ ನಿಮಿಷದಲ್ಲಿ ಭಾರತದ ಪರ ನಾಲ್ಕನೇ ಗೋಲು ದಾಖಲಿಸಿದರು. ‘‘ಪ್ರಥಮ ಪಂದ್ಯ ಯಾವಾಗಲೂ ಕಠಿಣವಾಗಿರುತ್ತದೆ. 4-1 ಅಂತರದ ಗೆಲುವು ಉತ್ತಮ ಫಲಿತಾಂಶವಾಗಿದ್ದರೂ ನಾವು ಇನ್ನಷ್ಟು ಉತ್ತಮವಾಗಿ ಆಡಬಹುದಿತ್ತು’’ ಎಂದು ಪಂದ್ಯದ ಬಳಿಕ ಭಾರತದ ಪ್ರಧಾನ ಕೋಚ್ ಅಲೆಕ್ಸ್ ಆ್ಯಂಬ್ರೋಸ್ ಹೇಳಿದರು. ಮುಂದಿನ ಪಂದ್ಯದಲ್ಲಿ ಶುಕ್ರವಾರ ಭಾರತ ಆತಿಥೇಯ ಭೂತಾನ್ ಎದುರು ಸೆಣಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News