ಮೊದಲ ಏಕದಿನ: ಭಾರತಕ್ಕೆ 8 ವಿಕೆಟ್ ಜಯ

Update: 2019-10-09 18:28 GMT

ವಡೋದರ, ಅ.9: ಗಾಯಗೊಂಡಿರುವ ಅನುಭವಿ ಆಟಗಾರ್ತಿ ಸ್ಮತಿ ಮಂಧಾನ ಅನುಪಸ್ಥಿತಿಯಲ್ಲಿ ಮೊದಲ ಬಾರಿ ಆಡುವ ಅವಕಾಶ ಪಡೆದ ಪ್ರಿಯಾ ಪೂನಿಯಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದ ಜಯ ದಾಖಲಿಸಲು ನೆರವಾಗಿದ್ದಾರೆ. ಈ ಮೂಲಕ ತನ್ನ ಚೊಚ್ಚಲ ಪಂದ್ಯದಲ್ಲಿ ಮಿಂಚುಹರಿಸಿದ್ದಾರೆ.

 ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ 45.1 ಓವರ್‌ಗಳಲ್ಲಿ ಕೇವಲ 164 ರನ್ ಗಳಿಸಿ ಆಲೌಟಾಯಿತು. ಆಲ್‌ರೌಂಡ್ ಪ್ರದರ್ಶನ ನೀಡಿದ ಭಾರತದ ಜುಲನ್ ಗೋಸ್ವಾಮಿ(3-33), ಶಿಖಾ ಪಾಂಡೆ(2-38), ಎಕ್ತಾ ಬಿಶ್ತ್(2-8) ಹಾಗೂ ಪೂನಂ ಯಾದವ್(2-33)ಸಂಘಟಿತ ಬೌಲಿಂಗ್ ದಾಳಿ ನಡೆಸಿ ಹರಿಣಪಡೆಯನ್ನು ಕಾಡಿದರು.

ಆರಂಭಿಕ ಆಟಗಾರ್ತಿಯರಾದ ಪೂನಿಯಾ(ಔಟಾಗದೆ 75, 124 ಎಸೆತ)ಹಾಗೂ ಜೆಮಿಮ್ಹಾ ರೋಡ್ರಿಗಸ್(55 ರನ್, 65 ಎಸೆತ)ಭಾರತದ ಭರ್ಜರಿ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಈ ತನಕ ಮೂರು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ್ದ ಪೂನಿಯಾ ಸ್ಟಾರ್ ಆಟಗಾರ್ತಿ ಮಂಧಾನ ಅನುಪಸ್ಥಿತಿಯಲ್ಲಿ ಚೊಚ್ಚಲ ಏಕದಿನ ಪಂದ್ಯ ಆಡುವ ಅವಕಾಶ ಗಿಟ್ಟಿಸಿಕೊಂಡರು. ತನಗೆ ಲಭಿಸಿದ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಜೈಪುರದ 23ರ ಹರೆಯದ ಮಂಧಾನ 8 ಬೌಂಡರಿಗಳನ್ನು ಬಾರಿಸಿದರು.

ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ರನ್ ಬರ ಎದುರಿಸಿದ್ದ ರೋಡ್ರಿಗಸ್ ಮೊದಲ ವಿಕೆಟ್ ಜೊತೆಯಾಟದಲ್ಲಿ ಪೂನಿಯಾ ಜೊತೆ 83 ರನ್ ಸೇರಿಸಿದರು. 19ರ ಹರೆಯದ ಪ್ರತಿಭಾವಂತ ಆಟಗಾರ್ತಿ ಏಳು ಬೌಂಡರಿಗಳ ನೆರವಿನಿಂದ ಎರಡನೇ ಅರ್ಧಶತಕ ದಾಖಲಿಸಿದರು.

ನಾಯಕಿ ಮಿಥಾಲಿ ರಾಜ್ ಮಾರ್ಚ್ ಬಳಿಕ ಮೊದಲ ಬಾರಿ ಭಾರತದ ಪರ ಮೊದಲ ಪಂದ್ಯ ಆಡಿದರು. 1999ರ ಜೂನ್‌ನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿರುವ ಮಿಥಾಲಿ ಕಳೆದ 20 ವರ್ಷಗಳಿಂದ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವ ಮೊತ್ತ ಮೊದಲ ಮಹಿಳಾ ಆಟಗಾರ್ತಿಯಾಗಿದ್ದಾರೆ. ರಾಜ್ ಕಳೆದ ತಿಂಗಳು ಟಿ-20 ಪಂದ್ಯದಿಂದ ನಿವೃತ್ತಿಯಾಗಿದ್ದರು.

ಹಿರಿಯ ವೇಗದ ಬೌಲರ್ ದಿನದ ಮೊದಲ ಎಸೆತದಲ್ಲಿ ಆಫ್ರಿಕಾಕ್ಕೆ ಆಘಾತ ನೀಡಿದರು. ಆರಂಭಿಕ ಆಟಗಾರ್ತಿ ಲೌರಾ ವೋಲ್ವಾರ್ಟ್(39) ಹಾಗೂ ತ್ರಿಶಾ ಚೆಟ್ಟಿ(14)ಇನಿಂಗ್ಸ್ ಆಧರಿಸಲು ಯತ್ನಿಸಿದರು. ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ 89 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ 115 ರನ್‌ಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡು ಕುಸಿತ ಕಂಡಿತು. ಅಂತಿಮವಾಗಿ 164 ರನ್ ಗಳಿಸಲು ಶಕ್ತವಾಯಿತು. ಮರಿಝಾನ್ ಕಾಪ್(54, 64 ಎಸೆತ)ದಕ್ಷಿಣ ಆಫ್ರಿಕಾ ಪರ ಗರಿಷ್ಠ ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News