ಕಾರಂತರ ಜೀವನ ಶೈಲಿ, ಸಾಧನೆಗಳು ಮುಂದಿನ ತಲೆಮಾರಿಗೆ ತಲುಪುವಂತಾಗಬೇಕು: ಸಾಹಿತಿ ಜಯಂತ ಕಾಯ್ಕಿಣಿ

Update: 2019-10-10 09:25 GMT

ಪುತ್ತೂರು: ನಾವೆಲ್ಲರೂ ಕಾರಂತ ಎಂಬ ಮಹಾನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದು, ಪ್ರಸ್ತುತ ಕಾರಂತರ ಅರಾಧನೆಯ ಕಾಲವಲ್ಲ, ಅವರ ಅವಾಹನೆಯನ್ನು ನಾವು ಮಾಡಬೇಕಾಗಿದೆ. ಅವರ ಬದುಕು, ಜೀವನ ಶೈಲಿ, ಸಾಧನೆಗಳು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸವಾಗಬೇಕಾಗಿದೆ ಎಂದು ಖ್ಯಾತ ಸಾಹಿತಿ ಹಾಗೂ ಚಿಂತಕ ಜಯಂತ ಕಾಯ್ಕಿಣಿ ಹೇಳಿದರು.

ಅವರು ಗುರವಾರ ಪುತ್ತೂರಿನ ಬಾಲವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ.ಶಿವರಾಮ ಕಾರಂತರ ಬಾಲವನ ಪರ್ಲಡ್ಕ, ಸಹಾಯಕ ಆಯುಕ್ತರ ಕಚೇರಿ ಪುತ್ತೂರು ಇವುಗಳ ಸಹಯೋಗದಲ್ಲಿ ನಡೆದ ಡಾ. ಶಿವರಾಮ ಕಾರಂತರ 118ನೇ ಜನ್ಮ ದಿನೋತ್ಸವ ಹಾಗೂ ಬಾಲವನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 

ಶಿವರಾಮ ಕಾರಂತರು ಜೀವನ ಮೌಲ್ಯದ ಹರಿಕಾರರಾಗಿದ್ದು, ಬಾಲವನದ ಪರಿಸರ, ಗಿಡಮರಗಳಲ್ಲಿ ಕಾರಂತರಿದ್ದಾರೆ. ಬದುಕಿನ ಬಹುಭಾಗವನ್ನು ಇಲ್ಲಿ ಕಳೆದಿರುವ ಅವರು ತನ್ನ ಬಹುತೇಕ ಕಾದಂಬರಿ ಸಹಿತ ಹಲವು ಲೇಖನಗಳನ್ನು ಇಲ್ಲಿಯೇ ಬರೆದು, ಇಲ್ಲಿಯೇ ಮುದ್ರಿಸಿದ್ದಾರೆ. ಕಾರಂತರು ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುವ ಕೆಲಸವನ್ನು ತನ್ನ ಲೇಖನಗಳ ಮೂಲಕ ಮಾಡಿದ್ದಾರೆ. ಬಾಲವನದಲ್ಲಿ ಕಾಲ ಕಳೆಯುವುದು ನಮ್ಮೆಲ್ಲರ ಪುನಶ್ಚೇತನಕ್ಕೆ ಪೂರಕವಾಗಿದೆ ಎಂದು ಹೇಳಿದರು

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಡಾ. ಶಿವರಾಮ ಕಾರಂತರು ಪುತ್ತೂರಿಗೆ ಹೆಮ್ಮೆಯನ್ನು ತಂದವರಾಗಿದ್ದಾರೆ. ಅವರ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರಿನಲ್ಲಿ ಕಾರಂತ ಥೀಂ ಪಾರ್ಕ್ ನಿರ್ಮಿಸುವ ಮೂಲಕ ಅವರ ಹೆಸರನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಜನತೆಯ ಸಹಕಾರದ ಅಗತ್ಯವಿದೆ ಎಂದರು. 

ಯಾವುದೇ ಪ್ರಶಸ್ತಿಗಳ ಮೌಲ್ಯವು ಆ ಪ್ರಶಸ್ತಿ ಪಡೆದುಕೊಳ್ಳುವ ವ್ಯಕ್ತಿಯ ಕೊಡುಗೆಗಳ ಮೂಲಕ ಲಭಿಸುತ್ತದೆ. ಈ ನಿಟ್ಟಿನಲ್ಲಿ ಕಾರಂತರ ನೆನಪಿನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿ ಪಡೆದುಕೊಳ್ಳುವ ಚಿಂತಕ ಜಯಂತ ಕಾಯ್ಕಿಣಿ, ಸನ್ಮಾನ ಪಡೆದ ಚಿದಂಬರ ಬೈಕಂಪಾಡಿ, ಪುರಸ್ಕಾರ ಪಡೆದ ಬಾಲ ವಿಜ್ಞಾನಿ ಅಮನ್ ಕೆ.ಎ ಅರ್ಹ ವ್ಯಕ್ತಿಗಳಾಗಿದ್ದಾರೆ ಎಂದರು. 

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರನ್ನು ಸನ್ಮಾನಿಸಲಾಯಿತು. ಬಾಲ ವಿಜ್ಞಾನಿ ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಲಯದ ವಿದ್ಯಾರ್ಥಿ ಅಮನ್ ಕೆ.ಎ ಅವರನ್ನು ಪುರಸ್ಕರಿಸಲಾಯಿತು. ಸನ್ಮಾನಿತರ ಪರವಾರಿ ಚಿದಂಬರ ಬೈಕಂಪಾಡಿ ಮಾತನಾಡಿದರು. 

ವೇದಿಕೆಯಲ್ಲಿ ಡಾ. ಶಿವರಾಮ ಕಾರಂತರ ಪುತ್ರಿ, ಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆ ಹಾಗೂ ಬಾಲವನ ಅಭಿವೃದ್ಧಿ ಸಮಿತಿ ಸದಸ್ಯೆ ಕ್ಷಮಾ ರಾವ್, ಪುತ್ತೂರು ಉಪವಿಭಾಗಾಧಿಕಾರಿಯಾದ ಬಾಲವನ ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಹೆಚ್.ಕೆ. ಕೃಷ್ಣಮೂರ್ತಿ, ನಗರಸಭಾ ಪೌರಾಯುಕ್ತೆ ರೂಪಾ ಟಿ ಶೆಟ್ಟಿ, ತಾ.ಪಂ. ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಸದಸ್ಯರಾದ ಶೈಲಾ ಪೈ, ವಿದ್ಯಾಗೌರಿ, ಇಂದಿರಾ ಆಚಾರ್ಯ. ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್ ಮತ್ತಿತರರು ಉಪಸ್ಥಿತರಿದ್ದರು. 

ಸರ್ಕಾರಿ ಮಹಿಳಾ ಪ.ಪೂ. ಕಾಲೇಜ್‍ನ ಪ್ರಾಂಶುಪಾಲ ಝೇವಿಯರ್ ಡಿಸೋಜ ಸ್ವಾಗತಿಸಿದರು. ತಹಸೀಲ್ದಾರ್ ಅನಂತ ಶಂಕರ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News