ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಿರುಕುಳ ನಿಲ್ಲಿಸಿ: ಸಂಘಟನೆಗಳ ಆಗ್ರಹ

Update: 2019-10-10 10:33 GMT

ಮಂಗಳೂರು,ಅ.10: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗವು ಗಲ್ಫ್ ರಾಷ್ಟ್ರಗಳಿಗೆ ತೆರಳುವ ಪ್ರಯಾಣಿಕರಿಗೆ ಅನಗತ್ಯವಾದ ದಾಖಲೆ ಹಾಜರುಪಡಿಸಲು ಒತ್ತಾಯಿಸಿ ಕಿರುಕುಳ ನೀಡುವ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಿಗೆ ಉಳ್ಳಾಲ ವಲಯ ಡಿವೈಎಫ್‌ಐ ಮುಖಂಡ ಅಶ್ರಫ್ ಕೆಸಿ ರೋಡ್ ಆಗ್ರಹಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್ ಸಿಬ್ಬಂದಿ ಹಾಗೂ ಇಮಿಗ್ರೇಷನ್ ಅಧಿಕಾರಿಗಳು ಗಲ್ಫ್ ಗೆ ತೆರಳುವ ಅದರಲ್ಲೂ ವಿಶೇಷವಾಗಿ ದುಬೈಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಕಿರುಕುಳ ನೀಡುತ್ತಿದ್ದಾರೆ. ಪಾಸ್‌ಪೋರ್ಟ್, ಟಿಕೆಟ್ ಹಾಜರು ಪಡಿಸಿದರೂ ಪ್ರಯಾಣಕ್ಕೆ ಅಗತ್ಯವೇ ಇರದ ದಾಖಲೆಗಳನ್ನು ಹಾಜರುಪಡಿಸುವಂತೆ ಕೋರಲಾಗುತ್ತದೆ. ಲಗೇಜ್ ಸ್ಕ್ಯಾನಿಂಗ್ ಸೌಲಭ್ಯವಿದ್ದರೂ ಅನಗತ್ಯವಾಗಿ ಲಗೇಜ್ ಬಿಚ್ಚುವಂತೆ ಮಾಡಿ ಆನಂತರ ಅದರಿಂದ ವಸ್ತುಗಳನ್ನು ಲಪಟಾಯಿಸಲಾಗುತ್ತದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೂ ಭಾರತೀಯ ನಾಗರೀಕನೇ ಅಲ್ಲದ ರೀತಿ ಸಂಶಯಾಸ್ಪದವಾಗಿ ನೋಡಲಾಗುತ್ತದೆ. ಹೀಗೆ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ಪ್ರಯಾಣಿಕರಿಗೆ ನಿರಂತರವಾಗಿ ನೀಡಲಾಗುತ್ತಿದೆ. ಈ ಬಗ್ಗೆ ಕೆಲ ದಿನಗಳ ಪ್ರವಾಸಿ ಸಂಘಟನೆಗಳ ಜೊತೆಗೂಡಿ ಪ್ರತಿಭಟನೆ ನಡೆಸಿ ಕಿರುಕುಳ ನಿಲ್ಲಿಸುವಂತೆ ಒತ್ತಾಯಿಸಿದ್ದರೂ ಕಿರುಕುಳ ಹಾಗೆಯೇ ಮುಂದುವರೆದಿದೆ. ಇನ್ನಾದರೂ ಪ್ರಾಧಿಕಾರದ ಮುಖ್ಯಸ್ಥರು ಈ ಕಿರುಕುಳ ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

'ಬಜ್ಪೆ ವಿಮಾನ ನಿಲ್ದಾಣದಲ್ಲಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ. ಗಲ್ಫ್ ರಾಷ್ಟ್ರಗಳಿಂದ ಬರುವ ಪ್ರಯಾಣಿಕರನ್ನು ಸಂಘಪರಿವಾರದ ಮನಸ್ಸಿನ ಸಿಬ್ಬಂದಿ ಮತ್ತು ಅಧಿಕಾರಿ ವರ್ಗವು ಸಂಶಯದಿಂದ ನೋಡುತ್ತಾರೆ. ಗಲ್ಫ್‌ಗೆ ಯಾಕೆ ಹೋದದ್ದು? ಯಾರನ್ನು ಭೇಟಿಯಾದದ್ದು ಎಂದು ಅಸಂಬದ್ಧವಾಗಿ ಪ್ರಶ್ನಿಸುತ್ತಾರೆ. ಅಧಿಕಾರಿ-ಸಿಬ್ಬಂದಿ ವರ್ಗದ ಕಿರುಕುಳದಿಂದಲೇ ಸಮಸ್ಯೆ ಎದುರಾಗಿದೆ. ಈಗಾಗಲೆ ಅನೇಕ ಪ್ರಯಾಣಿಕರು ಮಂಗಳೂರಿನ ಬದಲು ಕೇರಳದ ಕಣ್ಣೂರು ವಿಮಾನ ನಿಲ್ದಾಣದತ್ತ ಒಲವು ತೋರುತ್ತಿದ್ದಾರೆ. ಈ ಬಗ್ಗೆ ಪ್ರತಿಭಟನೆ, ಸಾಮಾಜಿಕ ಜಾಲತಾಣ ಸಹಿತ ಮಾಧ್ಯಮಗಳಲ್ಲಿ ಬಿರುಸಿನ ಚರ್ಚೆಯಾಗುತ್ತಿದ್ದರೂ ಕೂಡ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರು ವೌನ ತಾಳಿರುವುದು ವಿಪರ್ಯಾಸ. ಹಾಗಾಗಿ ಸಂಬಂಧಪಟ್ಟವರು ಇಲ್ಲಿ ಪ್ರಯಾಣಿಕರಿಗೆ ಅದರಲ್ಲೂ ಮುಸ್ಲಿಮರಿಗೆ ಆಗುವ ಅನ್ಯಾಯ, ಮಾನಸಿಕ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News