ಬಿ.ಸಿ.ರೋಡ್‍ನಲ್ಲಿ ಆಧಾರ್ ನೋಂದಣಿ, ತಿದ್ದುಪಡಿಯಲ್ಲಿ ಭಾರೀ ಲೋಪ: ಮೂವರು ವಜಾ- ಎಡಿಸಿ ಆದೇಶ

Update: 2019-10-10 15:19 GMT

ಬಂಟ್ವಾಳ, ಅ. 10: ತಾಲೂಕಿನ ಮಿನಿ ವಿಧಾನಸೌಧದ ಅಟಲ್‍ಜಿ ಜನಸ್ನೇಹಿ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿರುವ ಅಧಾರ್ ನೋಂದಣಿ ಕೇಂದ್ರದಲ್ಲಿ ನಡೆದ ಕರ್ತವ್ಯ ಲೋಪದ ಆರೋಪದಡಿ ಮೂವರು ಆಪರೇಟರ್ ಗಳನ್ನು ಕೆಲಸದಿಂದ ವಜಾಗೊಳಿಸುವಂತೆ ಅಪರಾ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಇಲ್ಲಿನ ಆಧಾರ್ ನೋಂದಣಿ ಕೇಂದ್ರದಲ್ಲಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಹಾಗೂ ಹೊಸ ಆಧಾರ್ ನೋಂದಣಿ ಶುಲ್ಕ ವಿನಾಯಿತಿ ಇದ್ದರೂ ಆಧಾರ್ ಸಿಬ್ಬಂದಿ ಮಾತ್ರ ಎಲ್ಲರಿಂದಲೂ 50 ರೂ. ಶುಲ್ಕ ಪಡೆಯುತ್ತಿದ್ದರು. ಅಲ್ಲದೆ, ಹೀಗೆ ಸಂಗ್ರಹಿಸಿದ ಲಕ್ಷಾಂತರ ರೂ. ಹಣವನ್ನು ಸರಕಾರದ ಖಾತೆಗೆ ಜಮಾ ಮಾಡದೆ ತಮ್ಮಲ್ಲೇ ಇರಿಸಿಕೊಂಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ರಶ್ಮಿ ಅವರು ತಕ್ಷಣ ಆಂತರಿಕ ತನಿಖೆ ನಡೆಸಿ ಸರಕಾರಕ್ಕೆ ಪಾವತಿಯಾಗಬೇಕಾದ ಹಣವನ್ನು ಆರೋಪಿತರಿಂದ ಸಂಬಂಧಪಟ್ಟ ಖಾತೆಗೆ ಜಮಾ ಮಾಡಿಸಿದ್ದರು. ಇದೀಗ  ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಮೂರು ಮಂದಿ ದಿನಗೂಲಿ ನೌಕರರನ್ನು ಕೆಲಸದಿಂದ ವಜಾಗೊಳಿಸಿ ಬದಲಿ ಸಿಬ್ಬಂದಿ ನೇಮಿಸುವಂತೆ ಅಪಾರ ಜಿಲ್ಲಾಧಿಕಾರಿ ರೂಪ ಆದೇಶ ಮಾಡಿದ್ದಾರೆ.

ದಿನಗೂಲಿ ನೌಕರರಾದ ಬಂಟ್ವಾಳ ಅಧಾರ್ ಕೇಂದ್ರದ ಆಶಾ, ವಿಜಯ ಹಾಗೂ ವಿಟ್ಲದ ಪ್ರಭಾ ಎಂಬವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.

'ವಾರ್ತಾಭಾರತಿ' ವರದಿ ಫಲಶ್ರುತಿ

ಆಧಾರ್ ನೋಂದಣಿ ಮತ್ತು ತಿದ್ದುಪಡಿ ವ್ಯವಸ್ಥೆಯಲ್ಲಿ ಭಾರೀ ಲೋಪಗಳನ್ನು ಸರಿಪಡಿಸಿ ಗ್ರಾಹಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಆಧಾರ್ ಅರ್ಜಿದಾರರ ದೂರಿನ ಹಿನ್ನಲೆಯಲ್ಲಿ "ಆಧಾರ್ ನೋಂದಣಿ, ತಿದ್ದುಪಡಿಯಲ್ಲಿ ಭಾರೀ ಲೋಪ: ಆರೋಪ ಶಿರ್ಷಿಕೆಯಡಿ ಸೆ. 27ರಂದು "ವಾರ್ತಾಭಾರತಿ"ಯು ಸುತ್ತೋಲೆಯ ಮಾಹಿತಿ ಸಹಿತ ವರದಿ ಪ್ರಕಟಿಸಿ, ಶಾಸಕ, ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿತ್ತು.

ಇದರೊಂದಿಗೆ ಆಧಾರ್ ತಿದ್ದುಪಡಿ ಸಂದರ್ಭ 15 ವರ್ಷಕ್ಕಿಂತ ಕೆಳಗಿನವರಿಂದಲೂ ಶುಲ್ಕ ವಸೂಲು ಮಾಡಲಾಗುತ್ತದೆ. ಅದಲ್ಲದೆ, ವಸೂಲು ಮಾಡಿ ಶುಲ್ಕಕ್ಕೆ ಯಾವುದೇ ರಶೀದಿ ನೀಡಲಾಗುತ್ತಿಲ್ಲ ಎಂಬ ಸಾರ್ವಜನಿಕರ ಆರೋಪವನ್ನು ವರದಿ ಮಾಡಿತ್ತು. ಈ ಬಗ್ಗೆ ಅರ್ಜಿದಾರರಿಂದ ಸಂಗ್ರಹಿಸುವ ಶುಲ್ಕವನ್ನು ಸರಕಾರದ ಖಾತೆಗೆ ಜಮಾ ಮಾಡಬೇಕೆಂಬ ಆದೇಶಪಡಿಸುವಂತೆ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ ತಹಶೀಲ್ದಾರರಿಗೆ ಸೂಚಿಸಿದ್ದರಲ್ಲದೆ, ಈ ವಿಚಾರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ಮಿನಿವಿಧಾನ ಸೌಧದಲ್ಲಿ ಆಧಾರ್ ಕೇಂದ್ರಕ್ಕೆ ಬರುವ ಗ್ರಾಹಕರಿಗೆ ಕಾಣುವಂತೆ ಸೂಚನಾ ಫಲಕ ಅಳವಡಿಸಲಾಗುವುದು ಎಂದು ತಹಶೀಲ್ದಾರ್ ರಶ್ಮಿ ಎಸ್.ಆರ್. ಪತ್ರಿಕೆಗೆ ತಿಳಿಸಿದ್ದು, ಇದೀಗ ಸೂಚನಾಫಲಕವನ್ನು ಹಾಕಲಾಗಿದೆ.

2 ದಿನಗಳು ಆಧಾರ್ ಕೇಂದ್ರ ತಾತ್ಕಲಿಕ ಸ್ಥಗಿತ

ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಮೂರು ಮಂದಿಯನ್ನು ಕೆಲಸದಿಂದ ವಜಾಗೊಳಿಸಿ ಬದಲಿ ಸಿಬ್ಬಂದಿಗಳನ್ನು ನೇಮಿಸುವಂತೆ ಅಪಾರ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಹೊಸ ಸಿಬ್ಬಂದಿಯ ನೇಮಕವಾಗಬೇಕಾದ ಕಾರಣ ಗುರುವಾರದಿಂದ ಎರಡು ದಿನಗಳ ಕಾಲ ಆಧಾರ್ ಕೇಂದ್ರವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸೋಮವಾರ ಹೊಸ ಸಿಬ್ಬಂದಿ ಕಾರ್ಯ ನಿರ್ವಹಿಸುವರು ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News