ಪತ್ರಕರ್ತ ಸುಭಾಶ್ಚಂದ್ರ ಕೆದೂರು ನಿಧನ

Update: 2019-10-10 15:54 GMT

ಕುಂದಾಪುರ, ಅ.10: ಯುವ ಪತ್ರಕರ್ತ, ಬಹುಮುಖ ಪ್ರತಿಭೆಯ ಸುಭಾಶ್ಚಂದ್ರ ಕೆದೂರು(42) ಅಲ್ಪಕಾಲದ ಅಸೌಖ್ಯದಿಂದ ಅ.10ರಂದು ಬೆಳಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇಲೆಕ್ಟ್ರೀಶಿಯನ್ ಆಗಿದ್ದ ಸುಭಾಶ್ಚಂದ್ರ, ನಂತರ ಬೆಂಗಳೂರಿನಲ್ಲಿ ಹೊಟೇಲ್ ಉದ್ಯೋಗಿಯಾಗಿದ್ದರು. ಈ ಮಧ್ಯೆ ಪತ್ರಿಕೋದ್ಯಮ ಕೋರ್ಸ್ ಮುಗಿಸಿದ ಅವರು, ಕೆಲ ಕಾಲ ಬೆಂಗಳೂರಿನ ಹಾಯ್ ಮಿತ್ರ ಸ್ಥಳೀಯ ಪತ್ರಿಕೆ ಹಾಗೂ ಅಗ್ನಿ ವಾರಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದರು.

ತದನಂತರ ಕೆಲ ಸಮಯ ಉಷಾಕಿರಣ ದಿನ ಪತ್ರಿಕೆಯಲ್ಲಿ ಉಡುಪಿ ವರದಿಗಾರರಾಗಿ ಕೆಲಸ ನಿರ್ವಹಿಸಿದ ಅವರು, ಉದಯವಾಣಿ ಪತ್ರಿಕೆಯಲ್ಲಿ ಉಡುಪಿ ಮತ್ತು ಮಣಿಪಾಲದಲ್ಲಿ 10 ವರ್ಷಗಳ ಕಾಲ ಉಪಸಂಪಾದಕ/ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.

ನಾಟಕ ರಚನೆ, ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದ ಸುಭಾಶ್, ಹಲವು ಕಾರ್ಯಕ್ರಮಗಳಲ್ಲಿ ತಾನೇ ನಾಟಕ ರಚಿಸಿ ನಿರ್ದೇಶನ ಮಾಡುತ್ತಿ ದ್ದರು. ಯಕ್ಷಗಾನ ಕಲೆಯಲ್ಲೂ ಕೈಯಾಡಿಸಿದ್ದ ಸುಭಾಶ್ಚಂದ್ರ, ಪ್ರಸಂಗ ರಚಿಸಿ, ನಿರ್ದೇಶನ ನೀಡಿದ್ದರು. ಅಲ್ಲದೆ ಯಕ್ಷಗಾನದ ಪಾತ್ರಗಳನ್ನು ಕೂಡ ಅವರು ನಿರ್ವಹಿಸಿದ್ದರು. ಪತ್ರಕರ್ತರಾಗಿ ಇವರು ವಿಶೇಷ ಸುದ್ದಿ, ಗ್ರಾಮೀಣ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿ ಸಿದ್ಧಪಡಿಸುವಲ್ಲಿ ಪರಿಣತರಾಗಿದ್ದರು.

ಮೂರು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾದ ಅವರು, ನಂತರ ಚಿಕಿತ್ಸೆಯಲ್ಲಿದ್ದರು. ಮೂರು ದಿನಗಳ ಹಿಂದೆ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖ ಲಾಗಿದ್ದ ಅವರು ಹಠಾತ್ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ ಕುಂದಾಪುರ ತಾಲೂಕು ಕೆದೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಗೀತಾ, ತಾಯಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಉಡುಪಿ, ಕುಂದಾಪುರ, ಬ್ರಹ್ಮಾವರ ಪತ್ರಕರ್ತರ ಸಂಘಗಳ ವತಿಯಿಂದ ಸಂತಾಪ ವ್ಯಕ್ತಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News