ಗುಪ್ತಚರ ವಿಭಾಗವು‌ ಪೊಲೀಸ್ ಇಲಾಖೆಗೆ ಬೆನ್ನೆಲುಬಿದ್ದಂತೆ: ಡಾ.ಡಿ.ವಿ. ಗುರುಪ್ರಸಾದ್

Update: 2019-10-10 16:20 GMT

ಮಂಗಳೂರು, ಅ.10: ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಪ್ರಮುಖವಾಗಿದೆ. ಸಮಾಜದಲ್ಲಿ ಏನೇನು ನಡೆಯುತ್ತಿದೆ ಎಂಬುದರ ಮಾಹಿತಿಯನ್ನು ಗುಪ್ತಚರ ವಿಭಾಗವು ಪೊಲೀಸ್ ಇಲಾಖೆಗೆ ಸಕಾಲದಲ್ಲಿ ನೀಡಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಸ್ಥಿರತೆ ಕಾಣಲು ಸಾಧ್ಯವಿಲ್ಲ. ಹಾಗಾಗಿ‌ ಪೊಲೀಸ್ ಇಲಾಖೆಗೆ ಗುಪ್ತಚರ ವಿಭಾಗವು ಬೆನ್ನೆಲುಬಿನಂತೆ ಕೆಲಸ‌ ಮಾಡಬೇಕಾಗಿದೆ ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಡಾ.ಡಿ.ವಿ.ಗುರುಪ್ರಸಾದ್ ಹೇಳಿದ್ದಾರೆ.

ನಗರದ ಪೊಲೀಸ್ ಆಯುಕ್ತಾಲಯದ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವೆಸ್ಡ್ ಲ್ಯಾಂಡ್ ಪ್ರಕಾಶನದ ಅಂಗಸಂಸ್ಥೆಯಾದ 'ಏಕ' ಹೊರತಂದ, ನಿವೃತ್ತ ಪೊಲೀಸ್ ಅಧಿಕಾರಿ ಕೆ. ವಿಜಯಕುಮಾರ್ ರಚಿಸಿದ ಇಂಗ್ಲಿಷ್ ‌ಕೃತಿಯ ಕನ್ನಡ ಅನುವಾದಿತ 'ವೀರಪ್ಪನ್-ದಂತಚೋರನ‌ ಬೆನ್ನಟ್ಟಿ' ಪುಸ್ತಕದ ಪರಿಚಯ ಮತ್ತು ಪತ್ರಕರ್ತರು-ಪೊಲೀಸರ ಜೊತೆ ಸಂವಾದ ನಡೆಸಿ‌ ಮಾತನಾಡಿದರು.

ಸಮಾಜದಲ್ಲಿ ಅಹಿತಕರ ಘಟನೆ  ನಡೆದಾಗ, ಶಾಂತಿ ‌ಕದಡಿದಾಗ ಗುಪ್ತಚರ ವಿಭಾಗದ ವೈಫಲ್ಯ ಎಂಬ ಆರೋಪ ಬರುವುದು ಸಹಜ. ಸಾಮಾನ್ಯವಾಗಿ ಗುಪ್ತಚರ ಪೊಲೀಸರು ಮಾಹಿತಿ ಸಂಗ್ರಹಿಸುತ್ತಾರೆ. ಆದರೆ ಸ್ವಲ್ಪ ಎಡವಟ್ಟಾದರೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಎಂದು ಡಿವಿ ಗುರುಪ್ರಸಾದ್ ಹೇಳಿದರು.

ಪತ್ರಕರ್ತರು ನಡೆದ ಘಟನೆಯ ಬಗ್ಗೆ ವರದಿ ಮಾಡಿದರೆ ಪೊಲೀಸ್ ಮತ್ತು ಗುಪ್ತಚರ ವಿಭಾಗವು ಅದರ ಹಿನ್ನಲೆ‌ ಮತ್ತು‌ ಮುಂದೆ ಸಂಭವಿಸಬಹುದಾದ ವಿದ್ಯಮಾನದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸುತ್ತಾರೆ. ಆದರೆ, ಪತ್ರಕರ್ತರು ‌ಮತ್ತು‌ ಪೊಲೀಸರು ‌ಕುತೂಹಲಿಗರಾದರೆ ಮಾತ್ರ ಉದ್ದೇಶ‌ ಈಡೇರಲಿದೆ ಎಂದು ಗುರುಪ್ರಸಾದ್ ಹೇಳಿದರು.

ಕೇವಲ ಒಂದನೆ‌ ತರಗತಿ ಕಲಿತಿದ್ದ ದಂತಚೋರ‌ ವೀರಪ್ಪನ್ ಪೊಲೀಸ್ ಇಲಾಖೆ ಮಾತ್ರವಲ್ಲ, ದೇಶದ ರಕ್ಷಣಾ ಇಲಾಖೆಯ ತಂತ್ರಜ್ಞಾನವನ್ನು‌ ಮೀರಿಸುವ ನೈಪುಣ್ಯತೆ ಪಡೆದಿದ್ದ. ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗಕ್ಕಿಂತಲೂ ತನ್ನದೇ ಆದ‌ ಗುಪ್ತಚರ ಬಲವನ್ನು ‌ಹೊಂದಿದ್ದ. ಅದಕ್ಕೆ ಸ್ಥಳೀಯರ ನೆರವು ಪಡೆಯುತ್ತಿದ್ದ. ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ.‌ ಕಷ್ಟಗಳಿಗೆ ಸಹಾಯ ಮಾಡುತ್ತಿದ್ದ. ಆದರೆ ಪೊಲೀಸ್ ಗುಪ್ತಚರ ವಿಭಾಗವು ಜನರೊಂದಿಗೆ ‌ಹೆಚ್ಚು ಬೆರೆಯದ ಕಾರಣ ಮಾಹಿತಿ ಸಂಗ್ರಹ ಮಾಡುವಲ್ಲಿ ವಿಫಲರಾಗುತ್ತಿದ್ದರು.‌ ಹಾಗಾಗಿ ಗುಪ್ತಚರ ಪೊಲೀಸರು ಜನಸ್ನೇಹಿ ಕೆಲಸ‌ ಮಾಡಬೇಕು. ಸಂಭಾವ್ಯತೆಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಪಡೆಯಬೇಕು ಎಂದು ಗುರುಪ್ರಸಾದ್ ಹೇಳಿದರು.

ಪೊಲೀಸ್ ಆಯುಕ್ತ ಡಾ.ಪಿ ಎಸ್‌. ಹರ್ಷ ಅಧ್ಯಕ್ಷತೆ ವಹಿಸಿದ್ದರು. ಡಿಸಿಪಿಗಳಾದ ಅರುಣಾಂಶಗಿರಿ, ಲಕ್ಷ್ಮಿಗಣೇಶ್ ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಾ.ಡಿವಿ ಗುರುಪ್ರಸಾದ್ ಈ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ಪ್ರಕಾಶ್ ಸಿಂಗ್ 2006ರಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ‌ಕೂಡ ಅರ್ಜಿದಾರರ ಪರವಾಗಿ ತೀರ್ಪು‌ ನೀಡಿತ್ತು. ಆದರೆ ಯಾವ ಸರಕಾರ ಕೂಡ ಅದನ್ನು‌ ಅನುಷ್ಠಾನಗೊಳಿಸಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News