ಸೌದಿ ಬಂದರಿನ ಸಮೀಪ ಇರಾನ್‌ನ ತೈಲ ಟ್ಯಾಂಕರ್ ಸ್ಫೋಟ

Update: 2019-10-11 18:25 GMT

ಟೆಹರಾನ್, ಅ. 11: ಸೌದಿ ಅರೇಬಿಯದ ಜಿದ್ದಾ ಬಂದರಿನ ಆಚೆಗಿನ ಸಮುದ್ರದಲ್ಲಿ ಶುಕ್ರವಾರ ಇರಾನ್ ಮಾಲೀಕತ್ವದ ತೈಲ ಹಡಗೊಂದರ ಮೇಲೆ ಎರಡು ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಇರಾನ್ ‌ನ ಸರಕಾರಿ ಟೆಲಿವಿಶನ್ ವರದಿ ಮಾಡಿದೆ.

ಕ್ಷಿಪಣಿಗಳು ಬಡಿದ ಬಳಿಕ ತೈಲ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದೆ ಹಾಗೂ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಹಡಗಿನ ಮಾಲಕ ಸಂಸ್ಥೆ ನ್ಯಾಶನಲ್ ಇರಾನಿಯನ್ ಆಯಿಲ್ ಕಂಪೆನಿ (ಎನ್‌ಐಒಸಿ)ಯ ಅಧಿಕಾರಿಗಳನ್ನು ಉಲ್ಲೇಖಿಸಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಜಿದ್ದಾದಿಂದ 96 ಕಿ.ಮೀ. ದೂರದಲ್ಲಿ ಸಮುದ್ರದಲ್ಲಿ ಕಚ್ಚಾ ತೈಲ ಸೋರಿಕೆಯಾಗಿದೆ ಎಂದಿವೆ.

ಈ ದಾಳಿಯ ಬಳಿಕ, ಪ್ರಾದೇಶಿಕ ವೈರಿ ಗಳಾದ ಇರಾನ್ ಮತ್ತು ಸೌದಿ ಅರೇಬಿಯದ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರುವ ಸಾಧ್ಯತೆಯಿದೆ.

ದಾಳಿಗೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಗಮನಿಸಿರುವುದಾಗಿ ಈ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಅಮೆರಿಕ ನೌಕಾಪಡೆಯ ಐದನೇ ಫ್ಲೀಟ್ ಹೇಳಿದೆ.

ತೈಲ ಹಡಗಿನ ಮೇಲೆ ‘ಭಯೋತ್ಪಾದಕ ದಾಳಿ’ ನಡೆಸಲಾಗಿದೆ ಎಂದು ಮೂಲವೊಂದನ್ನು ಉಲ್ಲೇಖಿಸಿ ಇರಾನ್‌ನ ‘ಇಸ್ನ’ ಸುದ್ದಿ ಸಂಸ್ಥೆ ಹೇಳಿದೆ. ಹಡಗಿನ ಎರಡು ಟ್ಯಾಂಕ್‌ಗಳಿಗೆ ಹಾನಿಯಾಗಿದೆ ಎಂದು ಇರಾನ್‌ನ ಸರಕಾರಿ ಟೆಲಿವಿಶನ್ ತಿಳಿಸಿದೆ.

ಸೆಪ್ಟಂಬರ್‌ನಲ್ಲಿ ಸೌದಿ ಅರೇಬಿಯದ ತೈಲ ಸ್ಥಾವರಗಳ ಮೇಲೆ ಯೆಮನ್‌ನ ಹೌದಿ ಬಂಡುಕೋರರು ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದರು. ಅದರಿಂದಾಗಿ ಸೌದಿ ಅರೇಬಿಯದ ತೈಲ ರಫ್ತಿನಲ್ಲಿ ಅರ್ಧದಷ್ಟು ಕುಸಿತವಾಗಿತ್ತು. ಅದಕ್ಕೂ ಮೊದಲು, ಮೇ ಮತ್ತು ಜೂನ್ ತಿಂಗಳಲ್ಲಿ ಕೊಲ್ಲಿ ವಲಯದಲ್ಲಿ ಹಲವು ತೈಲ ಹಡಗುಗಳ ಮೇಲೆ ದಾಳಿ ನಡೆದಿತ್ತು.

ತೈಲ ಹಡಗಿನ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಇರಾನ್‌ನ ರೆವಲೂಶನರಿ ಗಾರ್ಡ್ ಕಾರ್ಪ್ಸ್‌ಗೆ ನಿಕಟವಾಗಿರುವ ‘ನೂರ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News