ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿಗೆ ಜಾಮೀನು

Update: 2019-10-11 11:45 GMT

ಅಹ್ಮದಾಬಾದ್:  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು 'ಕೊಲೆ ಆರೋಪಿ' ಎಂದು ಬಣ್ಣಿಸಿದ್ದನ್ನು ಪ್ರಶ್ನಿಸಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣ ಸಂಬಂಧ ಇಂದು  ಅಹ್ಮದಾಬಾದ್ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಲಯದ ಮುಂದೆ ಹಾಜರಾದ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಾವು ಅಪರಾಧವೆಸಗಿಲ್ಲ ಎಂದು ನ್ಯಾಯಾಲಯದೆದುರು ಹೇಳಿಕೊಂಡರು.

ನ್ಯಾಯಾಲಯವು ರೂ 10,000ದ ಬಾಂಡ್ ಮೇಲೆ ಅವರಿಗೆ ಜಾಮೀನು ನೀಡಿದೆ. ತಮ್ಮ ಕಕ್ಷಿಗಾರರಿಗೆ ಖುದ್ದು  ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ಈ ಸಂದರ್ಭ ರಾಹುಲ್ ಅವರ ವಕೀಲರು ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದರು. ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ನಿಗದಿ ಪಡಿಸಿದ ನ್ಯಾಯಾಲಯ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂಬ ಅಪೀಲನ್ನೂ ಆ ಸಂದರ್ಭ ಪರಿಶೀಲಿಸಲು ನಿರ್ಧರಿಸಿದೆ.

ಆರು ತಿಂಗಳ ಹಿಂದೆ ಜಬಲ್ಪುರದಲ್ಲಿ ನಡೆದ ಚುನಾವಣಾ ರ್ಯಾಲಿಯ ಸಂದರ್ಭ ರಾಹುಲ್ ಗಾಂಧಿ ಬಿಜೆಪಿ ಅಧ್ಯಕ್ಷರೂ ಆಗಿರುವ ಶಾ ಅವರನ್ನು 'ಕೊಲೆ ಆರೋಪಿ' ಎಂದು ಬಣ್ಣಿಸಿದ್ದಕ್ಕೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಬಿಜೆಪಿ ಕಾರ್ಪೊರೇಟರ್ ಕೃಷ್ಣವದನ್ ಬ್ರಹ್ಮಭಟ್ಟ್  ದಾಖಲಿಸಿದ್ದರು.

ಅಮಿತ್ ಶಾ ಅವರು ಸೊಹ್ರಾಬುದ್ದೀನ್ ಶಾ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಖುಲಾಸೆಗೊಂಡಿದ್ದರಿಂದ ರಾಹುಲ್ ಅವರ ಹೇಳಿಕೆ ಮಾನಹಾನಿಕರ ಎಂದು ದೂರುದಾರರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News