ತಮಿಳುನಾಡಿನಲ್ಲಿ ಪಂಚೆ ಧರಿಸಿ ಗಮನಸೆಳೆದ ಪ್ರಧಾನಿ ಮೋದಿ

Update: 2019-10-11 17:49 GMT

ಮಹಾಬಲಿಪುರಂ, ಅ.11: ಭಾರತ ಹಾಗೂ ಚೀನಾ ನಡುವಿನ ಎರಡು ದಿನಗಳ ಅನೌಪಚಾರಿಕ ಶೃಂಗಸಭೆಲ್ಲಿ ಪಾಲ್ಗೊಳ್ಳಲು ಚೀನಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶುಕ್ರವಾರ ತಮಿಳುನಾಡಿನ ಐತಿಹಾಸಿಕ ಪರಂಪರೆಯ ಪಟ್ಟಣ ಮಹಾಬಲಿಪುರಂಗೆ ಆಗಮಿಸಿದರು. ಅವರನ್ನು ಪ್ರಧಾನಿ ನರೇಂದ್ರ ಮೋದಿ, ಮಹಾಬಲಿಪುರಂನ ಪ್ರಸಿದ್ಧ ಪಂಚರಥ ಶಿಲ್ಪಗೋಪುರದ ಬಳಿ ಸ್ವಾಗತಿಸಿದರು. ತಮಿಳು ನಾಡಿನ ಸಾಂಪ್ರದಾಯಿಕ ಲುಂಗಿ ಹಾಗೂ ಶಾಲು ಧರಿಸಿದ್ದ ನರೇಂದ್ರ ಮೋದಿಯವರು ಚೀನಿ ಅಧ್ಯಕ್ಷರಿಗೆ ತಾವೇ ಗೈಡ್ ಆಗಿ ಮಹಾಬಲಿಪುರಂನ ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ ಕರೆದೊಯ್ದು ಪರಿಚಯಿಸಿದರು.

ಉಭಯ ನಾಯಕರು ಮಹಾಬಲಿಪುರಂನ ಪ್ರಸಿದ್ಧ ದೇಗುಲಕ್ಕೂ ಭೇಟಿ ನೀಡಿದರು. ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಭಾರತ ಹಾಗೂ ಚೀನಾ ನಡುವೆ ನಡೆಯುತ್ತಿರುವ ಪ್ರಥಮ ಅನೌಪಚಾರಿಕ ಶೃಂಗಸಭೆ ಇದಾಗಿದೆ. ಕಳೆದ ವರ್ಷದ ಎಪ್ರಿಲ್‌ನಲ್ಲಿ ಚೀನಾದ ವೂಹಾನ್‌ನಲ್ಲಿ ಮೋದಿ ಹಾಗೂ ಜಿನ್ ಪಿಂಗ್ ಅವರು ಉಭಯದೇಶಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಮೊದಲ ಶೃಂಗಸಭೆಯನ್ನು ನಡೆಸಿದ್ದರು. ಇಂದು ಸಂಜೆ ನಿಯೋಗಮಟ್ಟದ ಮಾತುಕತೆಗಳು ನಡೆದ ಬಳಿಕ ಮೋದಿ ಹಾಗೂ ಕ್ಸಿ ಜಿನ್‌ಪಿಂಗ್ ನಡುವೆ ಮೂರು ತಾಸುಗಳ ಅನೌಪಚಾರಿಕ ಮಾತುಕತೆಗಳು ನಡೆದವು. ಈ ನಡುವೆ ಉಭಯ ದೇಶಗಳ ನಡುವೆ ನಿಯೋಗ ಮಟ್ಟದ ಮಾತುಕತೆಗಳೂ ನಡೆದಿವೆ. ಪ್ರಧಾನಿ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಅಧಿಕಾರಿ ಅಜಿತ್ ಧೋವಲ್ ಪಾಲ್ಗೊಂಡಿದ್ದರು.

ಚೀನಿ ಅಧ್ಯಕ್ಷರ ಜೊತೆ ಚೀನಾ ಕಮ್ಯೂನಿಸ್ಟ್ ಪಕ್ಷ (ಸಿಪಿಸಿ)ದ ಕೇಂದ್ರೀಯ ಸಮಿತಿ ಸದಸ್ಯ ಡೆಂಗ್ ಕ್ಸುಯೆಕ್ಸಿಯಾಂಗ್ ಹಾಗೂ ಸಿಪಿಸಿ ಕೇಂದ್ರೀಯ ಸಮಿತಿಯ ಮಹಾಕಚೇರಿಯ ನಿರ್ದೇಶಕ ಯಾಂಗ್ ಜಿಯೆಚಿ ಸೇರಿದಂತೆ 100 ಮಂದಿ ಪ್ರತಿನಿಧಿಗಳು ಆಗಮಿಸಿದ್ದಾರೆ.

ಕ್ಸಿಜಿನ್‌ಪಿಂಗ್‌ಗೆ ಸ್ವಾಗತ ಕೋರಿ ಶುಕ್ರವಾರ ಸಂಜೆ ಮಹಾಬಲಿಪುರಂನಲ್ಲಿ ಅದ್ದೂರಿಯಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಭಾರತ ಹಾಗೂ ಚೀನಾ ನಡುವಿನ ಸಾಂಸ್ಕೃತಿಕ ಬಾಂಧವ್ಯಗಳನ್ನು ಬಿಂಬಿಸುವ ನೃತ್ಯ,ರೂಪಕಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಉಭಯದೇಶಗಳ ನಾಯಕರು ಜೊತೆಯಾಗಿ ಕಾರ್ಯಕ್ರಮ ವೀಕ್ಷಿಸಿದರು.

ಮಹಾಬಲಿಪುರಂ ಭೇಟಿಯ ಸವಿನೆನಪಿಗಾಗಿ ಪ್ರಧಾನಿ ಮೋದಿ, ಕ್ಸಿ ಜಿನ್ ಪಿಂಗ್ ಅವರಿಗೆ ತಮಿಳುನಾಡಿನ ಪ್ರಸಿದ್ಧ ಅನ್ನಂ ದೀಪ ಹಾಗೂ ತಂಜಾವೂರ್ ಚಿತ್ರಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದರು.

ಸಂಜೆ ಕ್ಸಿಜಿನ್‌ಪಿಂಗ್ ಗೌರವಾರ್ಥ ನಡೆದ ಭೋಜನಕೂಟದಲ್ಲಿ ತಮಿಳುನಾಡಿನ ಸಾಂಪ್ರದಾಯಿಕ ಚೆಟ್ಟಿನಾಡು ಖಾದ್ಯಗಳು ಸೇರಿದಂತೆ ಭಾರತದ ವೈವಿಧ್ಯಮಯ ಖಾದ್ಯಗಳನ್ನು ಬಡಿಸಲಾಗಿತ್ತು.

ಇಂದು ಮಧ್ಯಾಹ್ನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕ್ಸಿಜಿನ್‌ಪಿಂಗ್ ಅವರನ್ನು ಸಾಂಪ್ರದಾಯಿಕ ನೃತ್ಯಗಳ ಮೂಲಕ ಬರಮಾಡಿಕೊಳ್ಳಲಾಯಿತು. ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಚೀನಾ ಅಧ್ಯಕ್ಷರನ್ನು ಸ್ವಾಗತಿಸಿದರು.

ಇದಕ್ಕೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 11:00 ಗಂಟೆಗೆ ಮಹಾಬಲಿಪುರಂಗೆ ಆಗಮಿಸಿದ್ದರು. ಶನಿವಾರ ಉಭಯದೇಶಗಳ ನಡುವೆ ಶೃಂಗಸಭೆ ಮುಂದುವರಿಯಲಿದ್ದು, ಕೆಲವು ಪ್ರಮುಖ ಒಪ್ಪಂದಗಳಿಗೆ ಸಹಿಹಾಕುವ ಸಾಧ್ಯತೆಯಿದೆ.

1300 ವರ್ಷಗಳ ಹಿಂದೆ ಪಲ್ಲವರ ಆಳ್ವಿಕೆಯ ಕಾಲದಲ್ಲಿ ಮಹಾಬಲಿಪುರಂ ಪಟ್ಟಣವು ಭಾರತ ಹಾಗೂ ಚೀನಾ ದೇಶಗಳ ನಡುವಿನ ಪ್ರಮುಖ ವಾಣಿಜ್ಯ ಬಂದರು ಕೇಂದ್ರವಾಗಿತ್ತು. ಈ ಐತಿಹಾಸಿಕ ಬಾಂಧವ್ಯದ ನೆನಪಿಗಾಗಿ ಈ ಪುರಾತನ ಪಟ್ಟಣದಲ್ಲಿ ಉಭಯದೇಶಗಳ ನಡುವೆ ಶೃಂಗಸಭೆ ನಡೆಯುತ್ತಿರುವುದು ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News