ಐಎನ್‌ಎಕ್ಸ್ ಪ್ರಕರಣ: ಚಿದಂಬರಮ್‌ಗೆ ಸಮನ್ಸ್ ಜಾರಿ ಮಾಡಿದ ವಿಶೇಷ ನ್ಯಾಯಾಲಯ

Update: 2019-10-11 15:11 GMT

ಹೊಸದಿಲ್ಲಿ, ಅ.11: ಐಎನ್‌ಎಕ್ಸ್ ಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರಿಗೆ ಸಮನ್ಸ್ ಜಾರಿ ಮಾಡಿರುವ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಮಧ್ಯಾಹ್ನ ತನ್ನ ಮುಂದೆ ಹಾಜರಾಗುವಂತೆ ಆದೇಶಿಸಿದೆ.

ಕಾಂಗ್ರೆಸ್ ನಾಯಕನನ್ನು ತನ್ನ ಕಸ್ಟಡಿಗೆ ಒಪ್ಪಿಸಬೇಕು ಎಂದು ಜಾರಿ ನಿರ್ದೇಶನಾಲಯ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಸಮನ್ಸ್ ಜಾರಿ ಮಾಡಿದೆ. ಸೋಮವಾರ ಮಧ್ಯಾಹ್ನ ಮೂರು ಗಂಟೆಗೆ ಚಿದಂಬರಂ ಅವರನ್ನು ತನ್ನ ಮುಂದೆ ಹಾಜರುಪಡಿಸುವಂತೆ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಸೂಚಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆಗೆ ಬಳಸಲಾಗಿದ್ದ ವಿದೇಶಿ ನಕಲಿ ಕಂಪೆನಿಗಳು ಮತ್ತು 17 ಬ್ಯಾಂಕ್ ಖಾತೆಗಳ ಬಗ್ಗೆ ವಿಚಾರಣೆ ನಡೆಸಲು ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯದ ಸುಪರ್ದಿಗೆ ಒಪ್ಪಿಸಬೇಕು ಎಂದು ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ವಾದಿಸಿದ್ದರು. ಐಎನ್‌ಎಕ್ಸ್ ಮಾದ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿತ್ತ ಸಚಿವ ಚಿದಂಬರಂ ಅವರನ್ನು ಸಿಬಿಐ ಆಗಸ್ಟ್ 21ರಂದು ವಿಚಾರಣೆಗೆಂದು ಬಂಧಿಸಿತ್ತು. ಎರಡು ವಾರಗಳ ಕಾಲ ಸಿಬಿಐ ಕಸ್ಟಡಿಯಲ್ಲಿ ಕಳೆದ ಅವರನ್ನು ಸೆಪ್ಟಂಬರ್ 5ರಂದು ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು.

ಚಿದಂಬರಂ ವಿಚಾರಣೆಯ ವೇಳೆ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿತ್ತು. ಈ ಆರೋಪವನ್ನು ಚಿದಂಬರಂ ತಳ್ಳಿಹಾಕಿದ್ದರು. ಹಿರಿಯ ಕಾಂಗ್ರೆಸ್ ನಾಯಕನಾಗಿರುವ ಚಿದಂಬರಂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ವಾದಿಸಿದ್ದ ತನಿಖಾ ಸಂಸ್ಥೆ ಅವರಿಗೆ ಜಾಮೀನು ನೀಡುವುದನ್ನು ವಿರೋಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News