68 ದಿನಗಳ ನಿರ್ಬಂಧದ ನಂತರ ಶನಿವಾರದಿಂದ ಕಾಶ್ಮೀರದಲ್ಲಿ ಪೋಸ್ಟ್‌ ಪೇಯ್ಡ್ ಮೊಬೈಲ್ ಸೇವೆಗಳು ಪುನರ್‌ಆರಂಭ

Update: 2019-10-11 15:30 GMT

ಶ್ರೀನಗರ,ಅ.11: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರದ ಬೆನ್ನಿಗೆ ಕಣಿವೆ ರಾಜ್ಯಾದ್ಯಂತ ಮೊಬೈಲ್ ಮತ್ತು ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ಪೈಕಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆಗಳು ಶನಿವಾರದಿಂದ ಪುನರ್‌ಆರಂಭಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಕಣಿವೆಯಲ್ಲಿ ಅಂತರ್ಜಾಲ ಸೇವೆ ಮರಳಿ ಆರಂಭಗೊಳ್ಳಲು ಚಂದಾದಾರರು ಇನ್ನೂ ಸ್ವಲ್ಪ ಸಮಯ ಕಾಯಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆರಂಭದಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆಗಳನ್ನು ಪುನಃಸ್ಥಾಪಿಸಲಾಗುವುದು ನಂತರ ಪ್ರೀಪೇಯ್ಡ್ ಸೇವೆಗಳನ್ನು ಆರಂಭಿಸಲಾಗುವುದು. ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆಗಳಿಗೆ ಗ್ರಾಹಕರ ಸರಿಯಾದ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಣಿವೆಯಲ್ಲಿ ಒಟ್ಟು 66 ಲಕ್ಷ ಮೊಬೈಲ್ ಚಂದಾದಾರರಿದ್ದು ಈ ಪೈಕಿ 40 ಲಕ್ಷ ಚಂದಾದಾರರು ಪೋಸ್ಟ್‌ಪೇಯ್ಡ್ ಸೌಲಭ್ಯ ಹೊಂದಿದ್ದಾರೆ.

 ಜಮ್ಮು ಮತ್ತು ಕಾಶ್ಮೀರವನ್ನು ಪ್ರವಾಸಿಗರಿಗೆ ತೆರೆದ ಎರಡು ದಿನಗಳ ನಂತರ ಕೇಂದ್ರ ಈ ನಿರ್ಧಾರವನ್ನು ಪ್ರಕಟಿಸಿದೆ. ಮೊಬೈಲ್ ಸೇವೆ ಕಾರ್ಯಾಚರಿಸದ ಯಾವ ಪ್ರವಾಸಿ ತಾಣಕ್ಕೂ ಪ್ರವಾಸಿಗರು ಭೇಟಿ ನೀಡುವುದಿಲ್ಲ ಎಂದು ಪ್ರವಾಸ ಸಂಘಟನೆಗಳು ಆಡಳಿತಕ್ಕೆ ಮನವಿ ಮಾಡಿದ ನಂತರ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಸ್ಟ್ 5ರಂದು ಸ್ಥಗಿತಗೊಳಿಸಲ್ಪಟ್ಟಿದ್ದ ಸ್ಥಿರ ದೂರವಾಣಿ ಸಂಪರ್ಕಗಳಲ್ಲಿ ಭಾಗಶಃ ಸಂಪರ್ಕಗಳನ್ನು ಆಗಸ್ಟ್ 17ರಂದು ಮರುಆರಂಭಿಸಲಾಗಿತ್ತು ಮತ್ತು ಸೆಪ್ಟಂಬರ್ 4ರ ಒಳಗಾಗಿ ಎಲ್ಲ 50,000 ಸ್ಥಿರ ದೂರವಾಣಿ ಸಂಪರ್ಕಗಳನ್ನೂ ಮರುಕಾರ್ಯಗತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News