×
Ad

ಆಗಸ್ಟ್‌ನಲ್ಲಿ 1.1ಶೇ. ದಷ್ಟು ಕುಸಿದ ಕೈಗಾರಿಕಾ ಉತ್ಪಾದನೆ

Update: 2019-10-11 20:56 IST

ಹೊಸದಿಲ್ಲಿ,ಅ.11: ಕೈಗಾರಿಕ ಉತ್ಪಾದನೆ ಸೂಚಿ (ಐಐಪಿ)ಯಿಂದ ಅಳೆಯುವ ಕೈಗಾರಿಕಾ ಉತ್ಪಾದನೆ ಅಥವಾ ಫ್ಯಾಕ್ಟರಿ ಉತ್ಪಾದನೆ ಆಗಸ್ಟ್ ತಿಂಗಳಲ್ಲಿ 1.1ಶೇ.ದಷ್ಟು ಕುಸಿದಿದೆ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶ ತಿಳಿಸಿದೆ.

 2018ರ ಆಗಸ್ಟ್‌ನಲ್ಲಿ ಕೈಗಾರಿಕಾ ಉತ್ಪಾದನಾ ಸೂಚಿಯನ್ನು ಶೇ.4.8ರಷ್ಟು ವಿಸ್ತರಿಸಲಾಗಿತ್ತು. ಕಳೆದ ವರ್ಷದ ಎಪ್ರಿಲ್-ಆಗಸ್ಟ್ ನಲ್ಲಿ ಸಂಚಿತ ಬೆಳವಣಿಗೆ ಶೇ.2.4 ಆಗಿತ್ತು ಎಂದು ಸಚಿವಾಲಯ ತಿಳಿಸಿದೆ.

2019ರ ಆಗಸ್ಟ್‌ನಲ್ಲಿ 23 ಕೈಗಾರಿಕಾ ಗುಂಪುಗಳ ಪೈಕಿ 15 ಗುಂಪುಗಳು ಋಣಾತ್ಮಕ ಬೆಳವಣಿಗೆಯನ್ನು ತೋರಿಸಿವೆ ಎಂದು ಸಚಿವಾಲಯ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಉತ್ಪಾದನೆ, ವಿದ್ಯುತ್ ಉತ್ಪಾದನೆ ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿನ ಕಳಪೆ ನಿರ್ವಹಣೆಯಿಂದ ಆಗಸ್ಟ್‌ನಲ್ಲಿ ಫ್ಯಾಕ್ಟರಿ ಉತ್ಪಾದನೆಯಲ್ಲಿ ಕುಸಿತ ಉಂಟಾಗಿದೆ ಎಂದು ಶುಕ್ರವಾರ ಬಿಡುಗಡೆಯಾದ ಅಂಕಿಅಂಶಗಳು ತೋರಿಸಿವೆ.

ಐಐಪಿಯ ಶೇ.77 ಪಾಲು ಹೊಂದಿರುವ ಉತ್ಪಾದನಾ ವಲಯ 2019ರ ಆಗಸ್ಟ್‌ನಲ್ಲಿ ಶೇ.1.2 ಕುಸಿತ ದಾಖಲಿಸಿದೆ. ಕಳೆದ ವರ್ಷ ಇದೇ ವೇಳೆ ಶೇ.5.2 ಅಭಿವೃದ್ಧಿ ದಾಖಲಿಸಿತ್ತು. ಕಳೆದ ವರ್ಷ ಶೆ.7.6 ಏರಿಕೆ ದಾಖಲಿಸಿದ್ದ ವಿದ್ಯುತ್ ಉತ್ಪಾದನೆ ವಲಯ ಆಗಸ್ಟ್‌ನಲ್ಲಿ ಶೇ.0.9 ಕುಸಿತ ಅನುಭವಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News