ಇವುಗಳನ್ನು ತಪ್ಪಿಯೂ ಫ್ರಿಜ್‌ನಲ್ಲಿಡಬೇಡಿ

Update: 2019-10-11 16:01 GMT

ಆಹಾರ,ತರಕಾರಿ,ಡೇರಿ ಉತ್ಪನ್ನಗಳು,ಮೀನುಮಾಂಸ ಇತ್ಯಾದಿಗಳನ್ನು ಸಾಧ್ಯವಾದಷ್ಟು ಸಮಯದವರೆಗೆ ಸಂರಕ್ಷಿಸಿಡಲು ಫ್ರಿಜ್ ನಮಗೆ ನೆರವಾಗುತ್ತದೆ. ಹೆಚ್ಚಿನ ಆಹಾರಗಳ ವಿಷಯದಲ್ಲಿ ಇದು ಸರಿ. ಆದರೆ ಕೆಲವು ಸಾಮಗ್ರಿಗಳನ್ನು ಫ್ರಿಜ್‌ ನಲ್ಲಿಡುವುದರಿಂದ ಅವು ತಮ್ಮ ತಾಜಾತನವನ್ನು ಕಳೆದುಕೊಳ್ಳುತ್ತವೆ ಎನ್ನುವುದೂ ಅಷ್ಟೇ ನಿಜ. ಕೆಲವೊಮ್ಮೆ ಫ್ರಿಜ್‌ನಲ್ಲಿಟ್ಟ ಆಹಾರಗಳು ಸ್ವಾದವನ್ನು ಕಳೆದುಕೊಳ್ಳುತ್ತವೆ. ಫ್ರಿಜ್‌ನಲ್ಲಿಡಬಾರದ ಕೆಲವು ವಸ್ತುಗಳ ಮಾಹಿತಿಯಿಲ್ಲಿದೆ......

►ಬಟಾಟೆ

ತಂಪು,ಹೆಚ್ಚು ಬೆಳಕಿರದ ಜಾಗವು ಬಟಾಟೆಗಳನ್ನು ದಾಸ್ತಾನಿಡಲು ಅತ್ಯುತ್ತಮವಾಗಿದೆ,ಆದರೆ ಫ್ರಿಜ್ ಅತಿಯಾಗಿ ತಂಪಾಗಿರುತ್ತದೆ. ಬಟಾಟೆಯನ್ನು ಫ್ರಿಜ್‌ನಲ್ಲಿಟ್ಟರೆ ಹೆಚ್ಚಿನ ತಂಪಿನಿಂದಾಗಿ ಅದರಲ್ಲಿಯ ಪಿಷ್ಟವು ವಿಭಜನೆಗೊಳ್ಳುತ್ತದೆ ಮತ್ತು ತನ್ನ ರುಚಿಯನ್ನು ಕಳೆದುಕೊಳ್ಳುತ್ತದೆ,ತಿನ್ನಲೂ ಅಹಿತಕರವಾಗಿರುತ್ತದೆ. ಫ್ರಿಜ್‌ ನಲ್ಲಿದ್ದಾಗ ಬಟಾಟೆಯಲ್ಲಿಯ ಪಿಷ್ಟವು ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಇದು ರುಚಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

►ಈರುಳ್ಳಿ

ಈರುಳ್ಳಿಯನ್ನು ಫ್ರಿಜ್‌ನಲ್ಲಿಟ್ಟರೆ ಬಹುಬೇಗನೆ ಕೆಡುತ್ತದೆ. ಅದನ್ನು ಯಾವಾಗಲೂ ಕೋಣೆಯ ಉಷ್ಣತೆಯಲ್ಲಿ,ಬಿಸಿಲು ನೇರವಾಗಿ ಬೀಳದ ಸ್ಥಳದಲ್ಲಿರಿಸಿದರೆ ಹೆಚ್ಚು ಬಾಳಿಕೆ ಬರುತ್ತದೆ.

►ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಫ್ರಿಜ್‌ನಲ್ಲಿರಿಸಿದರೆ ಅದು ಸ್ವಾದವನ್ನು ಕಳೆದುಕೊಳ್ಳುತ್ತದೆ. ಅದನ್ನು ಗಾಳಿಯಾಡಲು ಅವಕಾಶವಿರುವ ಕಂಟೇನರ್‌ಗಳಲ್ಲಿ ಇಡಬೇಕು

►ಮೆಲಾನ್

ಮೆಲಾನ್ ಗಳು ಅಥವಾ ಕಲ್ಲಂಗಡಿ ಜಾತಿಯ ಹಣ್ಣುಗಳು ಕೋಣೆಯ ಉಷ್ಣತೆಯಲ್ಲಿದ್ದಾಗ ತಿನ್ನಲು ಹೆಚ್ಚು ರುಚಿಕರವಾಗಿರುತ್ತವೆ. ಇವುಗಳನ್ನು ಫ್ರಿಜ್‌ನಲ್ಲಿರಿಸುವುದರಿಂದ ಅವು ತ್ವರಿತವಾಗಿ ತಮ್ಮ ಉತ್ಕರ್ಷಣ ನಿರೋಧಕ ಗುಣವನ್ನು ಕಳೆದುಕೊಳ್ಳುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಆದರೆ ಅವುಗಳನ್ನು ಕತ್ತರಿಸಿದಾಗ ತುಂಡುಗಳನ್ನು 3-4 ದಿನಗಳ ಕಾಲ ಫ್ರಿಜ್‌ನಲ್ಲಿರಿಸಬಹುದು.

►ಜೇನು

  ಜೇನನ್ನು ಫ್ರಿಜ್‌ನಲ್ಲಿರಿಸಿದರೆ ಅದು ಹರಳುಗಟ್ಟುತ್ತದೆ ಮತ್ತು ಘನೀಕರಣಗೊಳ್ಳುತ್ತದೆ. ಈ ಸ್ಥಿತಿಯಲ್ಲಿ ಅದನ್ನು ತಿನ್ನುವುದು ಹೆಚ್ಚುಕಡಿಮೆ ಅಸಾಧ್ಯವೇ ಆಗುತ್ತದೆ ಮತ್ತು ತಿಂದರೂ ಅಹಿತಕರ ಅನುಭವವನ್ನು ಉಂಟು ಮಾಡುತ್ತದೆ. ಅದನ್ನು ಕೋಣೆಯ ತಾಪಮಾನದಲ್ಲಿಟ್ಟರೆ ಬಹುಕಾಲ ಕೆಡದೆ ಇರುತ್ತದೆ.

►ಬ್ರೆಡ್

ಬ್ರೆಡ್ ಬೇಗನೆ ಹಾಳಾಗುವ ವಸ್ತುವಾಗಿದ್ದು,ಬೂಸ್ಟು ಬರದಿರಲು ಕೆಲವರು ಅದನ್ನು ಫ್ರಿಜ್‌ನಲ್ಲಿಡುತ್ತಾರೆ. ಹೀಗೆ ಮಾಡುವುದರಿಂದ ಬೂಸ್ಟು ಹಿಡಿಯುವುದಿಲ್ಲ ನಿಜ,ಆದರೆ ಅದು ಒಣಗುತ್ತದೆ ಮತ್ತು ತಿನ್ನಲು ಹಿತಕರವಾಗುವುದಿಲ್ಲ.

►ಬೀಜಗಳು

ಬಾದಾಮ್,ಗೋಡಂಬಿಯಂತಹ ಬೀಜಗಳನ್ನು ಫ್ರಿಜ್‌ನಲ್ಲಿಡುವುದರಿಂದ ಅವುಗಳಲ್ಲಿಯ ಎಣ್ಣೆಯ ಅಂಶವು ಜಿಡ್ಡಾಗುವುದನ್ನು ತಡೆಯುವ ಮೂಲಕ ಅವುಗಳ ಬಾಳಿಕೆಯನ್ನು ಹೆಚ್ಚಿಸಬಹುದು. ಆದರೂ ಅವುಗಳನ್ನು ತಣ್ಣಗಿನ ಸ್ಥಿತಿಯಲ್ಲಿ ತಿನ್ನಲು ಇಷ್ಟವಾಗುವುದಿಲ್ಲ,ಏಕೆಂದರೆ ಅವು ತಮ್ಮ ವಿಶಿಷ್ಟ ಸ್ವಾದವನ್ನು ಕಳೆದುಕೊಂಡಿರುತ್ತವೆ ಮತ್ತು ಫ್ರಿಜ್‌ನಲ್ಲಿಯ ಇತರ ಆಹಾರಗಳ ವಾಸನೆಯನ್ನು ಹೀರಿಕೊಂಡಿರುತ್ತವೆ. ಅವುಗಳನ್ನು ಗಾಳಿಯಾಡದ ಕಂಟೇನರ್‌ನಲ್ಲಿ ಕೋಣೆಯ ಉಷ್ಣತೆಯಲ್ಲಿ ಇಡುವುದು ಅತ್ಯುತ್ತಮ. ಫ್ರಿಜ್‌ನಲ್ಲಿರಿಸಿದ್ದರೆ ತಿನ್ನುವ ಮುನ್ನ ಡ್ರೈ ಪ್ಯಾನ್‌ನಲ್ಲಿ ಹುರಿದುಕೊಳ್ಳಬಹುದು.

►ಕಾಫಿ

ನೀವು ಕಾಫಿ ಪ್ರಿಯರಾಗಿದ್ದರೆ ಒಳ್ಳೆಯ ಕಾಫಿ ಮತ್ತು ಕೆಟ್ಟ ಕಾಫಿಯ ರುಚಿಯಲ್ಲಿನ ವ್ಯತ್ಯಾಸ ನಿಮಗೆ ಗೊತ್ತಿರುತ್ತದೆ. ಕಾಫಿ ಬೀಜಗಳನ್ನು ಇಡಿಯಾಗಿ ಅಥವಾ ಪುಡಿ ಮಾಡಿ ಫ್ರಿಜ್‌ನಲ್ಲಿಟ್ಟರೆ ಅದರ ಮೇಲೆ ನೀರು ಘನೀಕರಣಗೊಳ್ಳುತ್ತದೆ ಮತ್ತು ಇದರಿಂದ ಕಾಫಿಯ ರುಚಿ ಕೆಡುತ್ತದೆ. ಹೀಗಾಗಿ ಕಾಫಿಯನ್ನು ಗಾಳಿಯಾಡದ ಕಂಟೇನರ್‌ನಲ್ಲಿ ಹಾಕಿ ಕೋಣೆಯ ಉಷ್ಣತೆಯಲ್ಲಿರಿಸಬೇಕು.

►ಟೊಮೆಟೊ

ಟೊಮೆಟೊಗಳನ್ನು ಫ್ರಿಜ್‌ಗಿಂತ ಹೊರಗೇ ಇಟ್ಟರೆ ಚೆನ್ನಾಗಿರುತ್ತವೆ. ಅವುಗಳನ್ನು ಫ್ರಿಜ್‌ನಲ್ಲಿರಿಸುವುದರಿಂದ ಸ್ವಾದವನ್ನು ಕಳೆದುಕೊಳ್ಳುತ್ತವೆ. ಆದರೆ ಟೊಮೆಟೋ ಅತಿಯಾಗಿ ಹಣ್ಣಾಗತೊಡಗಿದರೆ ಅದನ್ನು ಫ್ರಿಜ್‌ನಲ್ಲಿರಿಸಬಹುದು.

►ಖಾರ ಸಾಸ್

  ಖಾರ್ ಸಾಸ್‌ನ್ನು ಫ್ರಿಜ್‌ನಲ್ಲಿ ಇರಿಸಬಹುದಾದರೂ ಅದರಲ್ಲಿಯ ಪೆಪ್ಪರ್‌ನ ಖಾರ ಒಂದಷ್ಟು ಕಡಿಮೆಯಾಗುತ್ತದೆ. ವಾಸ್ತವದಲ್ಲಿ ಖಾರ ಸಾಸ್‌ನ್ನು ಸಂರಕ್ಷಿಸಲು ಅದನ್ನು ಫ್ರಿಜ್‌ನಲ್ಲಿರಿಸುವ ಅಗತ್ಯವೇ ಇಲ್ಲ. ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಲು ಅದರಲ್ಲಿ ಸಾಕಷ್ಟು ವಿನೆಗರ್ ಇರುತ್ತದೆ.

►ಸೇಬು

 ನೀವು ತಿನ್ನುವ ಸೇಬು ತಂಪಾಗಿರಬೇಕು ಎಂದು ನೀವು ಬಯಸಿದ್ದರೆ ಅದನ್ನು ಫ್ರಿಜ್‌ನಲ್ಲಿರಿಸಬಹುದು,ಇಲ್ಲದಿದ್ದರೆ ಅದರ ಅಗತ್ಯವಿಲ್ಲ. ಸೇಬನ್ನು ಫ್ರಿಜ್‌ನಲ್ಲಿಟ್ಟರೆ ಅದು ಗರಿಗರಿಯಾಗಿರುವುದಿಲ್ಲ. 8-10 ದಿನಗಳವರೆಗೂ ಅವುಗಳನ್ನು ಕೋಣೆಯ ಉಷ್ಣತೆಯಲ್ಲಿ ಇರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News