ಚೆನ್ನೈಯಲ್ಲಿ ಚೀನಿ ಅಧ್ಯಕ್ಷರ ವಿರುದ್ಧ ಪ್ರತಿಭಟನೆ, ಐವರು ಟಿಬೆಟ್ ವಿದ್ಯಾರ್ಥಿಗಳು ಪೋಲಿಸ್ ವಶಕ್ಕೆ

Update: 2019-10-11 16:13 GMT

ಚೆನ್ನೈ,ಅ.11: ಶುಕ್ರವಾರ ಇಲ್ಲಿಯ ಐಟಿಸಿ ಗ್ರಾಂಡ್ ಚೋಳ ಹೋಟೆಲ್‌ನೆದುರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಭಾರತ ಭೇಟಿಯ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದ ಐವರು ಟಿಬೆಟ್ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕ್ಸಿ ಅವರು ಇಲ್ಲಿಗೆ ಸಮೀಪದ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎರಡನೆ ಅನೌಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಚೆನ್ನೈನ ಹೋಟೇಲ್‌ನಲ್ಲಿ ತಂಗಿದ್ದಾರೆ.

ವಿದ್ಯಾರ್ಥಿಗಳು ಪೊಲೀಸ್ ಸರ್ಪಗಾವಲನ್ನು ಭೇದಿಸಿ ನುಗ್ಗಿದ್ದು,ಟಿಬೆಟ್‌ಗೆ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ಘೋಷಣೆಗಳನ್ನೂ ಕೂಗಿದರು. ಅವರು ‘ಸ್ವತಂತ್ರ ಟಿಬೆಟ್’ನ ಧ್ವಜಗಳನ್ನೂ ಪ್ರದರ್ಶಿಸಿದ್ದರು.

ಶೃಂಗಸಭೆಯ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಚೆನ್ನೈ ನಗರದಲ್ಲಿ ಮತ್ತು ಹೊರವಲಯದಲ್ಲಿ ಪ್ರಮುಖ ಸಂಚಾರ ಮಾರ್ಗಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು,ಈ ಮಾರ್ಗಗಳಲ್ಲಿ ಶೃಂಗಸಭೆಯ ಎರಡೂ ದಿನ ಘನವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಚೆನ್ನೈನ ಕೊಟ್ಟಿವಕ್ಕಮ್‌ನಿಂದ ಕಡಪಕ್ಕಮ್‌ವರೆಗೆ ಗುರುವಾರದಿಂದ ನಾಲ್ಕು ದಿನ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಕರಾವಳಿಯುದ್ದಕ್ಕೂ ಭದ್ರತೆಯನ್ನು ಹೆಚ್ಚಿಸಲಾಗಿದ್ದು,ಹಲವಾರು ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News