×
Ad

ಉಗ್ರಚಟುವಟಿಕೆಗಳಿಗೆ ಅರ್ಥಿಕ ನೆರವು ಶಂಕೆ: ನಾಲ್ವರು ಆರೋಪಿಗಳ ಬಂಧನ

Update: 2019-10-11 22:46 IST

ಲಕ್ನೋ, ಅ.11: ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಒದಗಿಸುತ್ತಿದ್ದರೆಂಬ ಆರೋಪದಲ್ಲಿ ನಾಲ್ಕು ಮಂದಿಯನ್ನು ಉತ್ತರಪ್ರದೇಶ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

 ಬಂಧಿತ ಆರೋಪಿಗಳನ್ನು ಉಮ್ಮೆದ್ ಅಲಿ, ಸಂಜಯ್ ಅಗರ್‌ವಾಲ್, ಸಮೀರ್ ಸಲ್ಮಾನಿ ಹಾಗೂ ಐರಾಜ್ ಅಲಿ ಎಂದು ಗುರುತಿಸಲಾಗಿದ್ದು ಅವರನ್ನು ಲಖೀಂಪುರ ಜಿಲ್ಲೆಯ ನಿಘಾಸಾನ್ ಪ್ರದೇಶದಿಂದ ಗುರುವಾರ ಬಂಧಿಸಲಾಯಿತೆಂದು ಉತ್ತರಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಓ.ಪಿ.ಸಿಂಗ್ ಶುಕ್ರವಾರ ತಿಳಿಸಿದ್ದಾರೆ.

ಈ ನಾಲ್ವರು ಆರೋಪಿಗಳು ನೇಪಾಳದ ಮಾರ್ಗವಾಗಿ ಭಾರತಕ್ಕೆ ಹಣವನ್ನು ತರುತ್ತಿದ್ದರು ಹಾಗೂ ಅದನ್ನು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ನೀಡಲು ಬಳಸಿಕೊಳ್ಳುತ್ತಿದ್ದರೆಂದು ಡಿಜಿಪಿಯವರು ಆರೋಪಿಸಿದ್ದಾರೆ.

ಆರೋಪಿಗಳಿಂದ ಭಾರತೀಯ ಹಾಗೂ ನೇಪಾಳಿ ಕರೆನ್ಸಿಗಳು ಹಾಗೂ ಹಲವಾರು ಮೊಬೈಲ್ ಫೋನ್‌ಗಳನ್ನು ಪೊಲೀಸರು, ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಅವರು ಖೇರಿ ಹಾಗೂ ಬರೇಲಿ ನಗರದ ನಿವಾಸಿಗಳಾದ ಮುಮ್ತಾಝ್, ಫಾಹೀಮ್, ಸಿರಾಜುದ್ದೀನ್ ಹಾಗೂ ಸದಾಕತ್ ಅಲಿ ಅವರನ್ನು ತಮ್ಮ ಸಹಚರರೆಂದು ಗುರುತಿಸಿದ್ದಾರೆ. ಇತರ ದೇಶಗಳ ಬ್ಯಾಂಕ್ ಖಾತೆಗಳಿಂದ ಹಣವನ್ನು ನೇಪಾಳದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದುದಾಗಿ ಹಾಗೂ ಇದಕ್ಕಾಗಿ ಖಾತೆದಾರರಿಗೆ ಶೇ.5ರಷ್ಟು ಕಮೀಶನ್ ನೀಡುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆನಂತರ ಈ ಹಣವನ್ನು ನೇಪಾಳದ ಬ್ಯಾಂಕ್ ಖಾತೆಗಳಿಂದ ಹಿಂತೆಗೆದು ಅದನ್ನು ಭಾರತಕ್ಕೆ ತಂದು, ಭಾರತೀಯ ಕರೆನ್ಸಿಯಾಗಿ ಮಾರ್ಪಡಿಸುತ್ತಿದ್ದುದಾಗಿ ಅವರು ಹೇಳಿದ್ದಾರೆ. ತಮ್ಮ ಕೆಲಸಗಳಿಗಾಗಿ ಬಂಧಿತರು ಆರು ಶೇಕಡ ಕಮಿಶನ್ ಪಡೆಯುತ್ತಿದ್ದರೆಂದು ಡಿಜಿಪಿ ಓ.ಪಿ.ಸಿಂಗ್ ತಿಳಿಸಿದ್ದಾರೆ. ಆರೋಪಿಗಳು ತಮ್ಮ ಕಮಿಶನ್ ಹಣವನ್ನು ಪಡೆದ ಬಳಿಕ ಫಾಹೀಮ್ ಹಾಗೂ ಸದಾಕತ್ ಅವರಿಗೆ ಈ ಹಣವನ್ನು ನೀಡುತ್ತಿದ್ದರು. ಅವರು ಈ ಹಣವನ್ನು ದಿಲ್ಲಿಗೆ ಒಯ್ದು, ಅದನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ನೇಪಾಳದ ಜನಕಪುರದಲ್ಲಿ ರಾಷ್ಟ್ರ ಬ್ಯಾಂಕ್‌ನ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು ಸುಮಾರು 49 ಲಕ್ಷ ರೂ. ವೌಲ್ಯದ ಕರೆನ್ಸಿಯನ್ನು ಭಾರತಕ್ಕೆ ವರ್ಗಾಯಿಸಲಾಗಿತ್ತೆಂಬುದು ಕೂಡಾ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಭಯೋತ್ಪಾದನೆಗೆ ಧನಸಹಾಯಕ್ಕೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಇನ್ನು ತಾನು ಭಯೋತ್ಪಾದಕ ನಿಗ್ರಹ ದಳಕ್ಕೆ ಹಸ್ತಾಂತರಿಸುವುದಾಗಿಯೂ ಡಿಜಿಪಿ ಒ.ಪಿ.ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News