ಬ್ಯಾಂಕ್ ಗಳಲ್ಲಿ ಜನಸಾಮಾನ್ಯರ ಹಣಕ್ಕೆ ರಕ್ಷಣೆಯಿಲ್ಲದಿರುವುದು ಕ್ರೂರ ಅನ್ಯಾಯ: ಎಚ್‌ಡಿಎಫ್‌ಸಿ ಮುಖ್ಯಸ್ಥ ಪಾರೆಕ್
ಹೊಸದಿಲ್ಲಿ,ಅ.11: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ)ಯಲ್ಲಿ ತಲೆದೋರಿರುವ ಬಿಕ್ಕಟ್ಟಿನ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಎಚ್‌ಡಿಎಫ್‌ಸಿ ಮುಖ್ಯಸ್ಥ ದೀಪಕ್ ಪಾರೆಕ್, ಸಾಲಮನ್ನಾಗಳು ಮತ್ತು ಸಾಲ ವಜಾಗೊಳಿಸುವುದು ನಿರಂತರವಾಗಿ ನಡೆಯುತ್ತಿದ್ದರೂ ಜನಸಾಮಾನ್ಯರ ಉಳಿತಾಯವನ್ನು ರಕ್ಷಿಸಲು ಯಾವ ಆರ್ಥಿಕ ವ್ಯವಸ್ಥೆಯೂ ಇಲ್ಲದಿರುವುದು ಕ್ರೂರ ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಿಎಂಸಿ ಬ್ಯಾಂಕ್‌ನಿಂದ ಗ್ರಾಹಕರು 25,000ರೂ. ಮಾತ್ರ ಹಿಂಪಡೆದುಕೊಳ್ಳಬಹುದು ಎಂದು ಆರ್‌ಬಿಐ ಕಳೆದ ತಿಂಗಳು ತಿಳಿಸಿದ ಕಾರಣ ಸಾವಿರಾರು ಠೇವಣಿದಾರರ ಹಣ ಬ್ಯಾಂಕ್‌ನಲ್ಲಿ ಸಿಲುಕಿಕೊಂಡಿದೆ. ಪಿಎಂಸಿ ಬ್ಯಾಂಕ್ ರಿಯಲ್ ಎಸ್ಟೇಟ್ ಸಂಸ್ಥೆ ಎಚ್‌ಡಿಐಎಲ್‌ಗೆ ನಿಯಂತ್ರಣಕ್ಕೂ ಅಧಿಕ ಸಾಲ ನೀಡಿತ್ತು ಮತ್ತು ಅದರ ಅನುತ್ಪಾದಕ ಸಾಲವನ್ನು ಮುಚ್ಚಿಟ್ಟಿತ್ತು ಎನ್ನುವುದು ಕಂಡುಬಂದ ನಂತರ ಆರ್‌ಬಿಐ ಈ ನಿರ್ಬಂಧವನ್ನು ಹೇರಿತ್ತು.
“ನನ್ನ ಪ್ರಕಾರ, ಆರ್ಥಿಕತೆಯಲ್ಲಿ ಸಾಮಾನ್ಯ ಜನರು ಶ್ರಮಪಟ್ಟು ಉಳಿಸಿದ ಹಣವನ್ನು ದುರುಪಯೋಗಪಡಿಸಿಕೊಳ್ಳುವುದಕ್ಕಿಂತ ದೊಡ್ಡ ಪಾಪ ಇನ್ನೊಂದಿಲ್ಲ. ನಾವು ಸಾಲಮನ್ನಾ ಮತ್ತು ಸಾಲ ವಜಾದಂತಹ ವ್ಯವಸ್ಥೆಗೆ ಅವಕಾಶ ನೀಡಿದ್ದೇವೆ ಆದರೆ ಜನಸಾಮಾನ್ಯರು ಪ್ರಾಮಾಣಿಕವಾಗಿ ಉಳಿಸಿರುವ ಹಣವನ್ನು ರಕ್ಷಿಸಲು ಯಾವುದೇ ವಿತ್ತೀಯ ವ್ಯವಸ್ಥೆಯನ್ನು ಹೊಂದಿಲ್ಲ ಎನ್ನುವುದು ಒಂದು ಕ್ರೂರ ಅನ್ಯಾಯ ಎಂದು ಪಾರೆಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.