ಮುರ್ಷಿದಾಬಾದ್ ತ್ರಿವಳಿ ಕೊಲೆ ಪ್ರಕರಣ: ಇನ್ನೂ ಇಬ್ಬರು ಪೊಲೀಸರ ವಶಕ್ಕೆ

Update: 2019-10-12 14:28 GMT

ಕೋಲ್ಕತಾ, ಅ.12: ಮುರ್ಷಿದಾಬಾದ್ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಇಬ್ಬರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿರುವವರ ಸಂಖ್ಯೆ ನಾಲ್ಕಕ್ಕೇರಿದೆ.

ತನಿಖೆಯಲ್ಲಿ ಕೈಜೋಡಿಸಿರುವ ಸಿಐಡಿ ಅಧಿಕಾರಿಗಳ ತಂಡವು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದೆ ಎಂದು ಪೊಲೀಸರು ತಿಳಿಸಿದರು.

ಮಂಗಳವಾರ ದುರ್ಗಾಪೂಜೆ ಸಂಭ್ರಮದಲ್ಲಿದ್ದ ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್‌ನಲ್ಲಿ ಶಿಕ್ಷಕ ಬಂಧು ಪ್ರಕಾಶ ಪಾಲ್,ಅವರ ಗರ್ಭಿಣಿ ಪತ್ನಿ ಬ್ಯೂಟಿ ಮತ್ತು ಎಂಟರ ಹರೆಯದ ಪುತ್ರ ಅಂಗನ್ ಅವರ ಮೃತದೇಹಗಳು ಮನೆಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದವು. ಗುರುವಾರ ಬಿಜೆಪಿ ಮತ್ತು ಪ.ಬಂಗಾಳ ರಾಜ್ಯಪಾಲ ಜಗದೀಪ ಧಂಕರ್ ಅವರು ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ದಾಳಿ ನಡೆಸುವುದರೊಂದಿಗೆ ಮತ್ತು ಪಾಲ್ ತನ್ನ ಬೆಂಬಲಿಗರಾಗಿದ್ದರು ಎಂದು ಆರೆಸ್ಸೆಸ್ ಹೇಳಿಕೊಳ್ಳುವುದರೊಂದಿಗೆ ಈ ತ್ರಿವಳಿ ಕೊಲೆ ಪ್ರಕರಣವು ರಾಜಕೀಯ ಬಣ್ಣವನ್ನು ಪಡೆದುಕೊಂಡಿತ್ತು.

ಇದೊಂದು ವೈಯಕ್ತಿಕ ದ್ವೇಷದ ಪ್ರಕರಣವಾಗಿದೆ ಮತ್ತು ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಮೇಲ್ನೋಟದ ಸಾಕ್ಷಾಧಾರಗಳು ಮತ್ತು ಪ್ರಾಥಮಿಕ ತನಿಖೆ ಬೆಟ್ಟು ಮಾಡಿವೆ ಎಂದು ಪೊಲೀಸರು ಹೇಳಿದ್ದಾರೆ.

ಪಾಲ್ ಯಾವುದೇ ರಾಜಕೀಯ ಗುಂಪಿನೊಂದಿಗೆ ಗುರುತಿಸಿಕೊಂಡಿರಲಿಲ್ಲ ಎಂದು ಅವರ ಕುಟುಂಬ ಸದಸ್ಯರು ಸ್ಪಷ್ಟಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕಿರುವ ಡೈರಿ,ಕುಟುಂಬದಲ್ಲಿ ಗಂಭೀರ ಭಿನ್ನಾಭಿಪ್ರಾಯಗಳಿದ್ದವು ಎನ್ನುವುದನ್ನು ಸೂಚಿಸಿವೆ.

ಒಟ್ಟು ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದು,ವಿಚಾರಣೆಯ ಬಳಿಕ ಇಬ್ಬರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News