ಬಿಜೆಪಿ ಭಾರತವನ್ನು ‘ಪೊಲೀಸ್ ರಾಜ್ಯ’ವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ: ಕಾಂಗ್ರೆಸ್

Update: 2019-10-12 14:29 GMT

ಹೊಸದಿಲ್ಲಿ,ಅ.12: ಆದಾಯ ತೆರಿಗೆ ಇಲಾಖೆಯು ಪಕ್ಷದ ಲೆಕ್ಕಪತ್ರಗಳ ವಿಭಾಗದ ಐವರು ಉದ್ಯೋಗಿಗಳ ಮನೆಗಳ ಮೇಲೆ ಶುಕ್ರವಾರ ದಾಳಿ ನಡೆಸಿದೆ ಮತ್ತು ಶನಿವಾರವೂ ದಾಳಿಗಳು ಮುಂದುವರಿದಿವೆ ಎಂದು ಹೇಳಿರುವ ಕಾಂಗ್ರೆಸ್,ಬಿಜೆಪಿಯು ಭಾರತವನ್ನು ‘ಪೊಲೀಸ್ ರಾಜ್ಯ’ವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಶನಿವಾರ ಇಲ್ಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕ ಆನಂದ ಶರ್ಮಾ ಅವರು,ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷವಾಗಿರುವ ಬಿಜೆಪಿಯನ್ನು ಯಾರೂ ಪ್ರಶ್ನಿಸುತ್ತಿಲ್ಲ, ಹಾಗಾದರೆ ದೇಶದಲ್ಲಿ ಎರಡು ಬಗೆಯ ಕಾನೂನುಗಳಿವೆಯೇ ಎಂದು ಪ್ರಶ್ನಿಸಿದರು.

ಭಾರತವನ್ನು ಜನರು ಭೀತಿಯಿಂದ ಮತ್ತು ಅಭದ್ರತೆಯಿಂದ ಬದುಕುವ ರಾಷ್ಟ್ರವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ. ನೀವು ( ಬಿಜೆಪಿ) ಪ್ರತಿಪಕ್ಷಗಳ ಮೇಲೆ ದಾಳಿಗಳ ಭಯೋತ್ಪಾದನೆಯಿಂದ ಪೊಲೀಸ್ ಅಥವಾ ಕಣ್ಗಾವಲು ರಾಜ್ಯವನ್ನು ಸೃಷ್ಟಿಸುವಂತಿಲ್ಲ ಎಂದ ಅವರು,ಬಿಜೆಪಿಗೆ ರಾಜಕೀಯ ಪ್ರತೀಕಾರದ ಗೀಳು ಹಿಡಿದಿದೆ. ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಳ್ಳುವ ತನ್ನ ಅಜೆಂಡಾದ ಭಾಗವಾಗಿ ಅದು ಈಗ ಕಾಂಗ್ರೆಸ್ ಉದ್ಯೋಗಿಗಳ ನಿವಾಸಗಳ ಮೇಲೆ ದಾಳಿಗಳನ್ನು ಆರಂಭಿಸಿದೆ. ಇವರೆಲ್ಲ ಸಣ್ಣ ಸಂಬಳಕ್ಕೆ ದುಡಿಯುವ ನೌಕರರು,ನಾಯಕರಲ್ಲ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸುಮಾರು 40,000 ಕೋ.ರೂ.ಗಳನ್ನು ವೆಚ್ಚ ಮಾಡಿದೆ ಮತ್ತು ಶೇ.99ರಷ್ಟು ಚುನಾವಣಾ ಬಾಂಡ್‌ಗಳು ಅದರ ಪರವಾಗಿಯೇ ಇದ್ದವು,ಆದರೆ ಆ ಪಕ್ಷವನ್ನು ಯಾರೂ ಪ್ರಶ್ನಿಸುತ್ತಿಲ್ಲ ಎಂದು ವರದಿಗಳನ್ನು ಉಲ್ಲೇಖಿಸಿ ಶರ್ಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News