ಶೇ.99 ಪ್ರದೇಶದಲ್ಲಿ ನಿರ್ಬಂಧ ತೆರವು: ಜಮ್ಮು ಕಾಶ್ಮೀರ ಸರಕಾರ

Update: 2019-10-12 14:30 GMT

ಶ್ರೀನಗರ,ಅ.12: ಜಮ್ಮು ಮತ್ತು ಕಾಶ್ಮೀರದ ಶೇ.99 ಪ್ರದೇಶದಲ್ಲಿ ಜನರ ಚಲನವಲನದ ಮೇಲಿನ ನಿರ್ಬಂಧ ತೆರವುಗೊಳಿಸಲಾಗಿದೆ ಎಂದು ರಾಜ್ಯ ಸರಕಾರದ ವಕ್ತಾರ ರೋಹಿತ್ ಕನ್ಸಲ್ ಶನಿವಾರ ತಿಳಿಸಿದ್ದಾರೆ.

ಸಂವಿಧಾನದ 370ನೇ ವಿಧಿಯಡಿ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಶಾಂತಿ ಕದಡಲು ಪ್ರಯತ್ನಿಸುವ ಬಾಹ್ಯ ನೆರವನ್ನು ಹೊಂದಿರುವ ಉಗ್ರರನ್ನು ತಡೆಯಲು ನಿರ್ಬಂಧ ಹೇರುವುದು ಅನಿವಾರ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ. ರಾಜಕೀಯ ನಾಯಕರು ಸೇರಿದಂತೆ ವಶಕ್ಕೆ ಪಡೆದುಕೊಂಡಿರುವವರನ್ನು ಬಿಡುಗಡೆ ಮಾಡಲು ಅವರ ಮೇಲಿನ ಪ್ರಕರಣಗಳನ್ನು ಸರಕಾರ ಪರಿಶೀಲಿಸುತ್ತಿದೆ ಎಂದು ಕನ್ಸಲ್ ತಿಳಿಸಿದ್ದಾರೆ.

ಆಗಸ್ಟ್ 16ರಿಂದ ನಿಧಾನವಾಗಿ ನಿರ್ಬಂಧ ತೆರವುಗೊಳಿಸುತ್ತಾ ಬರಲಾಗಿದ್ದು ಸೆಪ್ಟಂಬರ್ ಮೊದಲ ವಾರದಲ್ಲಿ ಬಹುತೇಕ ನಿರ್ಬಂಧ ತೆರವುಗೊಳಿಸಲಾಗಿತ್ತು. 8-10 ಪೊಲೀಸ್ ಠಾಣೆಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ನಿರ್ಬಂಧ ಹಿಂಪಡೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರವಾಸಿಗರು ರಾಜ್ಯಕ್ಕೆ ಭೇಟಿ ನೀಡಬಹುದಾಗಿದ್ದು ಸರಕಾರ ಅವರಿಗೆ ಸಕಲ ಸೌಲಭ್ಯಗಳನ್ನು ಒದಗಿಸಲಿದೆ. ಪ್ರವಾಸಿ ತಾಣಗಳಲ್ಲಿ ಅಂತರ್ಜಾಲ ವ್ಯವಸ್ಥೆ ಪುನಃಸ್ಥಾಪಿಸಲಾಗಿದ್ದು ಅಗತ್ಯವಿದ್ದಲ್ಲಿ ಬಳಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News