ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ವಿದ್ಯಾರ್ಥಿಗಳ ಪ್ರತಿಜ್ಞೆ

Update: 2019-10-12 15:08 GMT

ಮಣಿಪಾಲ, ಅ.12: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಎಂಡ್ ಸಾಯನ್ಸ್‌ನ ಇಕಾಸೊಫಿಕಲ್ ಎಸ್ಥೆಟಿಕ್ಸ್ ವಿದ್ಯಾರ್ಥಿಗಳು ಇಂದು ‘ಹವಾಮಾನ ಸಂಭಾಷಣೆ’ (ಕ್ಲೈಮೆಟ್ ಕಾನ್‌ವರ್ಸ್‌ಷೇಶನ್) ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರು.

ಮಾಹೆಯ ಆಡಳಿತ ಕಟ್ಟಡದ ಮುಂದೆ ನೆಲದಲ್ಲಿ ಕುಳಿತು ವಿಶ್ವವಿದ್ಯಾಲಯದ ಜಿಯೋಪಾಲಿಟಿಕ್ಸ್, ಕಮ್ಯುನಿಕೇಷನ್, ಯುರೋಪಿಯನ್ ಸ್ಟಡೀಸ್, ಹ್ಯುಮಾನಿಟಿಕ್ಸ್, ಇಂಜಿನಿಯರಿಂಗ್ ಹಾಗೂ ಹೆಲ್ತ್ ಸಾಯನ್ಸ್ ವಿಭಾಗದ ವಿದ್ಯಾರ್ಥಿಗಳು ಈ ‘ಹವಾಮಾನ ಸಂಭಾಷಣೆ’ಯಲ್ಲಿ ಪಾಲ್ಗೊಂಡಿದ್ದರು.

ಈ ಸಂಭಾಷಣೆಯಲ್ಲಿ ಪ್ರಾದೇಶಿಕ, ರಾಷ್ಟ್ರೀಯ ವಿಷಯಗಳಿಂದ ಹಿಡಿದು ಅಂತಾರಾಷ್ಟ್ರೀಯ ವಿಷಯಗಳವರೆಗೆ ಚರ್ಚೆ ನಡೆಯಿತು. ಸಂಭಾಷಣೆಯನ್ನು ಪ್ರಾರಂಭಿಸಿದ ಪಾವನಿ ಪಾಂಡೆ, ಅನುಷಾ ಭಟ್, ಸೌಮಿ ಪ್ರತೀಕ್, ಸುಬ್ರಹ್ಮಣ್ಯ ಕಿಣಿ, ನಿಯತಿ, ವಿಜೇತಕೃಷ್ಣ ಹಾಗೂ ಕೃಷ್ಣಕುಮಾರ್ ಶರ್ಮ ಅವರು ಹವಾಮಾನ ಬದಲಾವಣೆಯು ಅವರ ಜೀವನಶೈಲಿ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಚರ್ಚಿಸಿದರು. ತಾವು ಯಾವ ರೀತಿ ಹವಾಮಾನ ಬದಲಾವಣೆಗೆ ಕಾರಣರಾಗುತಿದ್ದೇವೆ ಎಂಬ ಬಗ್ಗೆಯೂ ವಿಶ್ಲೇಷಿಸಿದರು.

ಇಲ್ಲಿನ ಕಡಲತೀರದ ಉದ್ದಕ್ಕೂ ಹಬ್ಬಿರುವ ಕಸದ ಬಗ್ಗೆ ಮಾತನಾಡಿದ ಎಂಐಸಿ ವಿದ್ಯಾರ್ಥಿ ಸ್ವೀಕೃತಿ ಎಂಲ್ಲರ ಗಮನ ಸೆಳೆದರು. ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಸುತ್ತಮುತ್ತಲ ಕಡಲತೀರದಲ್ಲಿ ಪ್ರಯಾಣಿಸುವಾಗ ತಮಗಾದ ಅನುಭವವನ್ನು ಹ್ಯುಮಾನಿಟಿ ವಿದ್ಯಾರ್ಥಿ ಅಭಿರಾಮ್ ವಿವರಿಸಿದರು.

ಯಾವುದೇ ಬಿಸಿ ಅಥವಾ ತಂಪು ಪಾನೀಯ ಕುಡಿಯುವಾಗ ಪ್ಲಾಸ್ಟಿಕ್ ಸ್ಟ್ರಾ, ಕಪ್‌ಗಳನ್ನು ಬಳಸುವುದನ್ನು ತಪ್ಪಿಸಲು, ಮರುಬಳಕೆ ಮಾಡಬಹುದಾದ ಸ್ಟೀಲ್ ಗ್ಲಾಸ್, ಕಪ್‌ಗಳನ್ನು ಬಳಸುವಂತೆ ನಿಯತಿ ಸಲಹೆ ನೀಡಿದರು. ತಮ್ಮ ತರಗತಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಮಾಡಲು ಸ್ಟೀಲ್ ಗ್ಲಾಸ್, ಕಪ್‌ಗಳನ್ನು ಇರಿಸಿರುವುದನ್ನು ಅವರು ವಿವರಿಸಿದರು.

ಮಹಾನಗರಗಳಾದ ಹೊಸದಲ್ಲಿ, ಬೆಂಗಳೂರು ಹೇಗೆ ಉಸಿರುಗಟ್ಟಿಸುತ್ತಿದೆ ಹಾಗೂ ಬಿಸಿಯಾಗುತ್ತಿದೆ ಎಂಬ ಬಗ್ಗೆಯೂ ವಿದ್ಯಾರ್ಥಿಗಳು ಚರ್ಚಿಸಿದರು. ಸುಬ್ರಹ್ಮಣ್ಯ ಕಿಣಿ ಮಾತನಾಡಿ, ಜಿಲ್ಲೆಯಲ್ಲಿ ಭಾರೀ ಮಳೆಯ ನಂತರವೂ ಮಣಿಪಾಲಕ್ಕೆ ನೀರು ಒದಗಿಸುವ ಬಜೆ ಅಣೆಕಟ್ಟಿನಲ್ಲಿ ಅರ್ಧದಷ್ಟು ಮಾತ್ರ ನೀರಿರುವುದನ್ನು ಆತಂಕದಿಂದ ವಿವರಿಸಿದರು. ಉಡುಪಿಯ ನೀರಿನ ಬೇಡಿಕೆಯನ್ನು ಈಡೇರಿಸಲು ಇದು ಸಾಕಾಗುವುದಿಲ್ಲ ಎಂಬ ವಿಚಾರವನ್ನು ಅವರು ಗಮನಕ್ಕೆ ತಂದರು.

ಅಭಿವೃದ್ಧಿಯ ಪ್ರಯತ್ನದಲ್ಲಿ ನಾವು ನಮ್ಮ ಪರಿಸರವನ್ನು ವ್ಯಾಪಕವಾಗಿ ಹಾನಿಗೊಳಿಸಿದ್ದೇವೆ. ಮರಗಳನ್ನು ಕಡಿಯುವುದರಿಂದ ಪರಿಸರ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ನದಿಗಳು ಹಾಗೂ ತೊರೆಗಳು ಹೇಗೆ ಬತ್ತುತ್ತಿವೆ ಎಂಬ ಕುರಿತೂ ವಿದ್ಯಾರ್ಥಿಗಳು ಚರ್ಚಿಸಿದರು.

ಈ ಗುಂಪು ಪ್ರತಿ ವಾರ ಸಭೆ ಸೇರಿ ಅಲ್ಲಲ್ಲಿ ಸಸಿಗಳನ್ನು ನೆಡುವುದು, ಅರಣ್ಯ ಮತ್ತು ಗಿಡಮರಗಳಿರುವ ಕಡೆ ತ್ಯಾಜ್ಯವನ್ನು ತೆರವುಗೊಳಿಸುವುದು, ಮಣಿಪಾಲ ಆಸುಪಾಸು ಸಾರ್ವಜನಿಕ ಸ್ಥಳಗಳಲ್ಲಿ ಡಸ್ಟ್‌ಬಿನ್ ಅಳವಡಿಸುವ ಚಟುವಟಿಕೆ ಕೈಗೊಳ್ಳಲು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News