ಚೀನಾಕ್ಕೆ ರಾಜೀವ್ ಗಾಂಧಿ ಭೇಟಿ ಉಭಯ ರಾಷ್ಟ್ರಗಳ ನಡುವೆ ಮಾತುಕತೆಗಳಿಗೆ ನಾಂದಿ ಹಾಡಿತ್ತು: ಕಾಂಗ್ರೆಸ್

Update: 2019-10-12 16:12 GMT

ಹೊಸದಿಲ್ಲಿ, ಅ.12: ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಡುವಿನ ಅನೌಪಚಾರಿಕ ಶೃಂಗಸಭೆಯು ಶನಿವಾರ ಅಂತ್ಯಗೊಂಡ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು 1988ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಚೀನಾ ಭೇಟಿಯು ಉಭಯ ರಾಷ್ಟ್ರಗಳ ನಡುವೆ ಅರ್ಥಪೂರ್ಣ ಮಾತುಕತೆಗಳಿಗೆ ನಾಂದಿ ಹಾಡಿತ್ತು ಮತ್ತು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ಅದನ್ನು ಪ್ರಬುದ್ಧ ತಿಳುವಳಿಕೆಯ ಮಟ್ಟಕ್ಕೆ ಒಯ್ದಿತ್ತು ಎಂದು ಹೇಳಿದೆ.

ಶನಿವಾರ ಇಲ್ಲಿ ಅಕ್ಸಾಯ್ ಚಿನ್ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ವಕ್ತಾರ ಆನಂದ ಶರ್ಮಾ ಅವರು, ಪಾಕಿಸ್ತಾನವು ಅಕ್ರಮವಾಗಿ ಚೀನಾಕ್ಕೆ ನೀಡಿರುವ ಕಾಶ್ಮೀರದ ಭಾಗವು ಭಾರತಕ್ಕೆ ಮರಳಿಸಲ್ಪಡಬೇಕು ಎಂಬ ನಿರ್ಣಯವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಅಂಗೀಕರಿಸಿತ್ತು ಎಂದು ತಿಳಿಸಿದರು.

ಉಭಯ ರಾಷ್ಟ್ರಗಳ ನಡುವೆ ನಡೆದ ಶೃಂಗಸಭೆಯನ್ನು ಕಾಂಗ್ರೆಸ್ ಗಮನಿಸಿದೆ ಎಂದರು.

ಶೃಂಗಸಭೆಯ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ಅವರು,ಭಾರತ ಮತ್ತು ಚೀನಾ ನೆರೆಕರೆಯ ರಾಷ್ಟ್ರಗಳು ಮಾತ್ರವಲ್ಲ,ವಿಶ್ವದ ಎರಡು ಪ್ರಮುಖ ಆರ್ಥಿಕತೆಗಳು ಮತ್ತು ಅತ್ಯಂತ ಹೆಚ್ಚು ಜನಸಂಖ್ಯೆಯ ರಾಷ್ಟ್ರಗಳೂ ಆಗಿವೆ. ಉಭಯ ರಾಷ್ಟ್ರಗಳು ಸಮಸ್ಯೆಗಳು ಮತ್ತು ಬಗೆಹರಿಯದ ವಿವಾದಗಳನ್ನು ಹೊಂದಿದ್ದರೂ ಅವುಗಳ ನಡುವಿನ ಪಾಲುದಾರಿಕೆಯು ಬಹು ಆಯಾಮಗಳನ್ನು ಹೊಂದಿದೆ ಎಂದರು.

ಜಮ್ಮು-ಕಾಶ್ಮೀರವು ಭಾರತದ ಅಖಂಡ ಭಾಗವಾಗಿದೆ ಮತ್ತು ಕಾಶ್ಮೀರ ಸಮಸ್ಯೆಯು ಸಂಪೂರ್ಣವಾಗಿ ದೇಶದ ಆಂತರಿಕ ವಿಷಯವಾಗಿದೆ ಎನ್ನುವ ಕಾಂಗ್ರೆಸ್ ನಿಲುವು ದೃಢವಾಗಿದೆ ಎಂದು ಶರ್ಮಾ ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News