ಮಂಜುರಾಣಿ ಫೈನಲ್‌ಗೆ, ಜಮುನಾಗೆ ಕಂಚು

Update: 2019-10-12 18:12 GMT

 ಮಾಸ್ಕೋ, ಅ.12: ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಇದೇ ಮೊದಲ ಬಾರಿ ಸ್ಪರ್ಧಿಸುತ್ತಿರುವ ಮಂಜು ರಾಣಿ(48ಕೆಜಿ) ಫೈನಲ್ ಪ್ರವೇಶಿಸಿ ಮಹತ್ವದ ಸಾಧನೆ ಮಾಡಿದರು. ಇಲ್ಲಿ ಶನಿವಾರ ನಡೆದ ಸೆಮಿ ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ರಾಣಿ ಥಾಯ್ಲೆಂಡ್‌ನ ಚುಥಾಮಟ್ ರಕ್ಸತ್ ಅವರನ್ನು 4-1 ಅಂತರದಿಂದ ಸೋಲಿಸಿದರು. ರಾಣಿ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ರಶ್ಯದ ಎರಡನೇ ಶ್ರೇಯಾಂಕದ ಎಕಟೆರಿನಾ ಪಲ್ಟ್‌ಸೇವಾರನ್ನು ಎದುರಿಸಲಿದ್ದಾರೆ.

ಹಿರಿಯ ಬಾಕ್ಸರ್ ಮೇರಿಕೋಮ್ ಹಾಗೂ ಮೊದಲ ಬಾರಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿರುವ ಇನ್ನೋರ್ವ ಬಾಕ್ಸರ್ ಜಮುನಾ ಬೋರೊ(54ಕೆಜಿ)ಸೆಮಿ ಫೈನಲ್ ಪಂದ್ಯವನ್ನು ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

 ಜಮುನಾ ಬೋರೊ ಅಗ್ರ ಶ್ರೇಯಾಂಕದ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಚೈನೀಸ್ ತೈಪೆಯ ಹುಯಾಂಗ್ ಸಿಯಾವೊ-ವೆನ್ ವಿರುದ್ಧ 0-5 ಅಂತರದಿಂದ ಸೋತಿದ್ದಾರೆ. ಹರ್ಯಾಣದ ಬಾಕ್ಸರ್ ರಾಣಿ ಕಳೆದ ವರ್ಷವಷ್ಟೇ ರಾಷ್ಟ್ರೀಯ ಶಿಬಿರಕ್ಕೆ ಸೇರ್ಪಡೆಯಾಗಿದ್ದರು. ಶನಿವಾರ ನಡೆದ ಪಂದ್ಯದಲ್ಲಿ ತನಗಿಂತ ಶಕ್ತಿಶಾಲಿ ಬಾಕ್ಸರ್ ರಕ್ಸತ್ ವಿರುದ್ಧ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದರು. ಮೊದಲೆರಡು ಸುತ್ತಿನಲ್ಲಿ ಪ್ರತಿದಾಳಿಗೆ ಒತ್ತು ನೀಡಿದ ರಾಣಿ ಕೊನೆಯ ಮೂರು ನಿಮಿಷಗಳಲ್ಲಿ ಎಚ್ಚರಿಕೆಯ ಆಟವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News