ವಿಶ್ವಕಪ್ ಅರ್ಹತಾ ಪಂದ್ಯ: ಬಾಂಗ್ಲಾದೇಶ ವಿರುದ್ಧ 23 ಸದಸ್ಯರ ಭಾರತ ತಂಡ ಪ್ರಕಟ

Update: 2019-10-12 18:15 GMT

ಗುವಹಾಟಿ, ಅ.12: ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ ವಿರುದ್ಧ ಮಂಗಳವಾರ ನಡೆಯಲಿರುವ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ 23 ಸದಸ್ಯರ ಭಾರತೀಯ ತಂಡವನ್ನು ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್ ಶನಿವಾರ ಪ್ರಕಟಿಸಿದ್ದಾರೆ. ವಿವೈಬಿಕೆ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಿಂದ ಡಿಫೆಂಡರ್‌ಗಳಾದ ಸಂದೇಶ್ ಜಿಂಗನ್ ಮತ್ತು ಅನ್ವರ್ ಅಲಿ (ಜೂ) ಗಾಯದ ಸಮಸ್ಯೆಯಿಂದಾಗಿ ಹೊರಗುಳಿಯಲಿದ್ದಾರೆ. ಇದೇ ವೇಳೆ, ಹಲಿಚರಣ್ ನರ್ಝರಿ, ಫಾರೂಕ್ ಚೌಧರಿ ಮತ್ತು ನಿಶು ಕುಮಾರ್ ಅಂತಿಮ 23ರಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ‘‘ಹಿರಿಯ ಡಿಫೆಂಡರ್ ಸಂದೇಶ್ ಜಿಂಗಾನ್ ಬುಧವಾರ ಗುವಾಹಟಿ ಮೂಲದ ನಾರ್ತ್-ಈಸ್ಟ್ ಯುನೈಟೆಡ್ ತಂಡದ ವಿರುದ್ಧ ಸೌಹಾರ್ದ ಪಂದ್ಯ ಆಡುವ ವೇಳೆ ಎಡ ಮಂಡಿನೋವಿಗೆ ಒಳಗಾಗಿದ್ದರು. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಅವರು ಸಕ್ರಿಯ ಕ್ರೀಡೆಗೆ ವಾಪಸಾಗಲು ಆರು ತಿಂಗಳು ಬೇಕಾಗಬಹುದು’’ ಎಂದು ಟೀಮ್ ಫಿಸಿಯೋ ಗಿಗಿ ಜಾರ್ಜ್ ಹೇಳಿದ್ದಾರೆ.

‘‘ಸಂದೇಶ್ ನಮ್ಮ ಪ್ರಮುಖ ಆಟಗಾರ. ಅವರು ಕೋಲ್ಕತಾ ಪಂದ್ಯದಿಂದ ವಂಚಿತರಾಗಿದ್ದಾರೆ. ಅವರು ಬಲಿಷ್ಠರಾಗಿ ತಂಡಕ್ಕೆ ವಾಪಸಾಗುವ ವಿಶ್ವಾಸವಿದೆ’’ ಎಂದು ಕೋಚ್ ಸ್ಟಿಮ್ಯಾಕ್ ಹೇಳಿದ್ದಾರೆ.

ದೋಹಾದಲ್ಲಿ ಏಶ್ಯನ್ ಚಾಂಪಿಯನ್ ಕತರ್ ವಿರುದ್ಧ ಡ್ರಾಗೊಂಡ ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು,‘‘ಸಂದೇಶ್ ತಂಡದಿಂದ ಹೊರಗುಳಿದಿರುವುದು ನಮಗೆ ದೊಡ್ಡ ನಷ್ಟ. ಈ ಕ್ಷಣಕ್ಕೆ ಇದು ನಿಜಕ್ಕೂ ಬೇಸರದ ವಿಚಾರ. ಅವರೊಬ್ಬ ಬಲಿಷ್ಠ ಆಟಗಾರನಾಗಿದ್ದು, ಸಂಪೂರ್ಣ ಫಿಟ್ ಆಗಿ ತಂಡಕ್ಕೆ ವಾಪಸಾಗಲಿದ್ದಾರೆ’’ ಎಂದರು.

ಭಾರತ ರವಿವಾರ ಕೋಲ್ಕತಾಕ್ಕೆ ಪ್ರಯಾಣ ಬೆಳೆಸಲಿದೆ.

► 23 ಸದಸ್ಯರ ತಂಡ ಇಂತಿದೆ:

► ಗೋಲ್‌ಕೀಪರ್‌ಗಳು: ಗುರುಪ್ರೀತ್ ಸಿಂಗ್ ಸಂಧು (ನಾಯಕ), ಅಮರಿಂದರ್ ಸಿಂಗ್, ಕಮಲ್ಜಿತ್ ಸಿಂಗ್.

► ಡಿಫೆಂಡರ್‌ಗಳು: ಪ್ರೀತಂ ಕೊತಲ್, ರಾಹುಲ್ ಬೆಕೆ, ಆದಿಲ್ ಖಾನ್, ನರೇಂದ್ರ, ಸಾರ್ಥಕ್ ಗೊಲುಯಿ, ಅನಸ್ ಎಡತೊಡಿಕ, ಮಂದರ್ ರಾವ್ ದೇಸಾಯಿ, ಸುಭಾಶಿಶ್ ಬೋಸ್.

► ಮಿಡ್‌ಫೀಲ್ಡರ್‌ಗಳು: ಉದಾಂತ ಸಿಂಗ್, ನಿಖಿಲ್ ಪೂಜಾರಿ, ವಿನಿತ್ ರೈ, ಅನಿರುದ್ಧ ಥಾಪಾ, ಅಬ್ದುಲ್ ಸಹಾಲ್, ರೇನಿಯರ್ ಫೆರ್ನಾಂಡಿಸ್, ಬ್ರೆಂಡನ್ ಫೆರ್ನಾಂಡಿಸ್, ಲಲಿಯನ್ಝುವಲ ಚಂಗ್ಟೆ, ಆಶಿಕ್ ಕುರುನಿಯನ್.

► ಫಾರ್ವರ್ಡ್‌ಗಳು: ಸುನೀಲ್ ಚೆಟ್ರಿ, ಬಲವಂತ್ ಸಿಂಗ್, ಮನವೀರ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News