ಸ್ಯಾಮ್ಸನ್‌ ವೇಗದ ದ್ವಿಶತಕ

Update: 2019-10-12 18:25 GMT

ಆಲೂರು(ಕರ್ನಾಟಕ), ಅ.12: ಕೇರಳದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಇಲ್ಲಿ ಶನಿವಾರ ನಡೆದ ವಿಜಯ ಹಝಾರೆ ಟ್ರೋಫಿಯಲ್ಲಿ ಗೋವಾ ವಿರುದ್ಧ ಮೊದಲ ಬಾರಿ ದ್ವಿಶತಕ ಸಿಡಿಸಿದರು. ಇಲ್ಲಿನ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೇರಳ ತಂಡ ಸ್ಯಾಮನ್ಸ್ ದ್ವಿಶತಕ(212 ರನ್, 129 ಎಸೆತ)ನೆರವಿನಿಂದ 377 ರನ್ ಗಳಿಸಿತು. ಸ್ಯಾಮ್ಸನ್ 21 ಬೌಂಡರಿ ಹಾಗೂ 10 ಸಿಕ್ಸರ್‌ಗಳನ್ನು ಸಿಡಿಸಿದರು.

ಸ್ಯಾಮ್ಸನ್‌ಗೆ 127 ರನ್ ಗಳಿಸಿದ ಸಚಿನ್ ಬೇಬಿ ಸಾಥ್ ನೀಡಿದರು. ಈ ಇಬ್ಬರು 3ನೇ ವಿಕೆಟ್ ಜೊತೆಯಾಟದಲ್ಲಿ 338 ರನ್ ಸೇರಿಸಿ ಕೇರಳ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ಮಾತ್ರವಲ್ಲ 25 ವರ್ಷಗಳ ಹಳೆಯ ದಾಖಲೆ ಮುರಿದರು. ಸ್ಯಾಮ್ಸನ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಆರನೇ ಬ್ಯಾಟ್ಸ್ ಮನ್. ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಕರ್ಣ್ ಕೌಶಲ್ ಈ ಸಾಧನೆ ಮಾಡಿದ್ದಾರೆ. 50 ಓವರ್‌ಗಳ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ದ್ವಿಶತಕ ಸಿಡಿಸಿದ ಭಾರತದ ಏಕೈಕ ಬ್ಯಾಟ್ಸ್‌ಮನ್ ಸ್ಯಾಮ್ಸನ್. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಸ್ಯಾಮ್ಸನ್ ಪಾಕ್‌ನ ಅಬಿದ್ ಅಲಿ ದಾಖಲೆಯನ್ನು ಮುರಿದರು. 24ರ ಹರೆಯದ ಸ್ಯಾಮ್ಸನ್ ಕೇವಲ 125 ಎಸೆತಗಳಲ್ಲಿ ದ್ವಿಶತಕ ತಲುಪಿದರು. ಇದು ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ವೇಗದ ದ್ವಿಶತಕವಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ವೇಗವಾಗಿ ದ್ವಿಶತಕ ಸಿಡಿಸಿದ ವಿಶ್ವದ 2ನೇ ಕ್ರಿಕೆಟಿಗ ಸ್ಯಾಮ್ಸನ್. ಆಸ್ಟ್ರೇಲಿಯದ ಟ್ರಾವಿಸ್ ಹೆಡ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗವಾಗಿ(120 ಎಸೆತ)ದ್ವಿಶತಕ ಸಿಡಿಸಿದ ಮೊದಲಿಗನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News