ಜಾತಿ, ಧರ್ಮದ ಆಧಾರದಲ್ಲಿ ಕಾರ್ಮಿಕರ ಐಕ್ಯತೆ ಒಡೆಯಲು ಷಡ್ಯಂತರ: ಜೆ.ಸುರೇಶ್

Update: 2019-10-13 10:50 GMT

ಉಡುಪಿ, ಅ.13: ಕಾರ್ಮಿಕರ ಐಕ್ಯತೆಯ ಹೋರಾಟವನ್ನು ಕೆಲವೊಂದು ಶಕ್ತಿಗಳು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯಲು ಷಡ್ಯಂತರ ಮಾಡುತ್ತಿವೆ. ಆ ನೀತಿಯನ್ನು ನಾವು ಸೋಲಿಸಲೇ ಬೇಕು. ನಮ್ಮ ಕಾರ್ಮಿಕ ವರ್ಗ ಪ್ರಜ್ಞೆ ಎಚ್ಚರ ಮಾಡಿ ಕೊಂಡಾಗ ಮಾತ್ರ ನಮ್ಮ ಮುಂದಿ ರುವ ಸವಾಲುಗಳನ್ನು ಐಕ್ಯತೆ ಎದುರಿಸಲು ಸಾಧ್ಯವಾಗುತ್ತದೆ ಎಂದು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಜೊತೆ ಕಾರ್ಯದರ್ಶಿ ಜೆ.ಸುರೇಶ್ ಆರೋಪಿಸಿದ್ದಾರೆ.

ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದ ಕಾ.ಬಿ.ಮಾಧವ ವೇದಿಕೆಯಲ್ಲಿ ರವಿವಾರ ಆಯೋಜಿಸಲಾದ ವಿಮಾ ನೌಕರರ ಸಂಘದ ಉಡುಪಿ ವಿಭಾಗದ 61ನೆ ವಿಭಾಗೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಇರುವ ಒಂದೇ ಒಂದು ಆಯುಧ ಅಂದರೆ ಸಂಘಟನೆ. ಅದನ್ನು ಗಟ್ಟಿಗೊಳಿಸಲು ಪ್ರಯತ್ನ ಮಾಡಬೇಕು. ಕಾರ್ಮಿಕರು ತಮ್ಮಲ್ಲಿರುವ ಕಾರ್ಮಿಕ ವರ್ಗ ಪ್ರಜ್ಞೆಯಿಂದ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ವಿಶ್ಲೇಷಣೆ ಮಾಡಬೇಕೆ ಹೊರತು ಜಾತಿ, ಧರ್ಮವನ್ನು ಆಧಾರಿಸಿ ಅಲ್ಲ. ಆಳುವ ವರ್ಗದ ನೀತಿಗಳಲ್ಲಿ ಬದಲಾವಣೆ ಬರಬೇಕಾದರೆ ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಅತಿ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಮಾತನಾಡಿ, ಮುಷ್ಕರ ನಿರತ ಕಾರ್ಮಿಕರ ಮಾತುಕತೆ ನಡೆಸಲು ತಯಾರಿಲ್ಲದ ಕೇಂದ್ರ ಸರಕಾರವು ಫ್ಯಾಸಿಸ್ಟ್ ರೀತಿಯಲ್ಲಿ ವರ್ತಿಸುತ್ತಿದೆ. ಇದು ಮುಂದೆಯೂ ಕಾರ್ಮಿಕರ ಮೇಲೆ ಸಾಕಷ್ಟು ದಾಳಿಗಳನ್ನು ನಡೆಸಲಿದೆ ಎಂಬುದನ್ನು ಸಾಬೀತು ಪಡಿಸುತ್ತದೆ. ಕಾರ್ಮಿಕರ ಕಾನೂನುಗಳ ಸುಧಾರಣೆ ಹೆಸರಿನಲ್ಲಿ ಕಾರ್ಮಿಕ ಕಾಯಿದೆಗಳನ್ನೇ ತಿದ್ದುಪಡಿ ಮಾಡಲು ಹೊರಟಿದೆ ಎಂದು ದೂರಿದರು.

ರಾಜಕೀಯ ಅನಕ್ಷರತೆಯಿಂದ ಇಂದು ದೇಶದ ಮಧ್ಯಮ ವರ್ಗ ಬೀದಿ ಪಾಲು ಆಗುತ್ತಿದೆ. ದೇಶದಲ್ಲಿನ ಸಮಸ್ಯೆಗಳಿಗೂ ಆಡಳಿತ ವರ್ಗಕ್ಕೂ ಸಂಬಂಧ ಇರುವ ಬಗ್ಗೆ ನಾವು ಅರ್ಥ ಮಾಡಿಕೊಳ್ಳದಿದ್ದರೆ ಮುಂದೆ ಕೂಲಿ ಆಳುಗಳಾಗಿ ಬದುಕುವ ಪರಿಸ್ಥಿತಿ ಬರುತ್ತದೆ. ದಾರಿ ತಪ್ಪುತ್ತಿರುವ ಸರಕಾರವನ್ನು ಸರಿ ದಾರಿಗೆ ತರುವ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ರಕ್ಷಣಾತ್ಮಕ ಹೋರಾಟದ ಬದಲು ಆಕ್ರಮಣಕಾರಿ ಹೋರಾಟ ಮಾಡಿದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಬಿಜೆಪಿ ಪ್ರಕಾರ ಈ ದೇಶದ ಸಾಮಾನ್ಯ ಜನರನ್ನು, ಬಡವರನ್ನು, ಕಾರ್ಮಿಕರನ್ನು ಇನ್ನಷ್ಟು ಪಾತಾಳಕ್ಕೆ ತಳ್ಳಿ, ಶ್ರೀಮಂತರ ಸಂಪತ್ತನ್ನು ಹೆಚ್ಚಿಸುವುದೇ ದೇಶಪ್ರೇಮವಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು.

ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಉಪಾಧ್ಯಕ್ಷೆ ಎಸ್.ಕೆ. ಗೀತಾ, ಎಲ್‌ಐಸಿ ಕ್ಲಾಸ್ 1 ಆಫೀಸರ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಅಣ್ಣಯ್ಯ ನೀಲಾವರ್, ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಬಿ.ಕುಂದರ್, ಮಾಜಿ ಪ್ರಧಾನ ಕಾರ್ಯದರ್ಶಿ ಗಳಾದ ವಿಶ್ವನಾಥ್ ರೈ, ಅದಮಾರು ಶ್ರೀಪತಿ ಆಚಾರ್ಯ, ಬಿಎಸ್‌ಎನ್‌ಎಲ್ ನೌಕರರ ಸಂಘದ ಶಶಿಧರ್ ಗೊಲ್ಲ, ವಿಮಾ ಪಿಂಚಣಿದಾರರ ಸಂಘದ ಅಧ್ಯಕ್ಷ ಕೆ.ಆರ್.ಭಟ್ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಅಧ್ಯಕ್ಷ ಕೆ.ವಿಶ್ವನಾಥ್ ವಹಿಸಿದ್ದರು. ಜೊತೆ ಕಾರ್ಯದರ್ಶಿ ಕವಿತಾ ಎಸ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

‘ಎಲ್‌ಐಸಿ ವಿರುದ್ಧ ಕುತಂತ್ರ’

31ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಎಲ್‌ಐಸಿ, 3ಲಕ್ಷ ಕೋಟಿ ರೂ. ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದೆ. ಈ ಹೂಡಿಕೆ ಯಿಂದ ಕಳೆದ ಒಂದು ವರ್ಷದಲ್ಲಿ 31ಸಾವಿರ ಕೋಟಿ ರೂ. ಆದಾಯವನ್ನು ಪಡೆದುಕೊಳ್ಳಲಾಗಿದೆ. ಹೀಗಿರುವಾಗ ಎಲ್‌ಐಸಿ ಯಾವುದೇ ರೀತಿಯಲ್ಲಿ ನಷ್ಟ ಅನುಭವಿಸುತ್ತಿಲ್ಲ. ಕೆಲವೊಂದು ಶಕ್ತಿಗಳು ಎಲ್‌ಐಸಿ ವಿರುದ್ಧ ಕುತಂತ್ರ ನಡೆಸಿ ನಕರಾತ್ಮಕವಾದ ಪ್ರಚಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಜನರಿಂದ ಸಂಗ್ರಹಿಸಿದ ಹಣವನ್ನು ಜನ ಕಲ್ಯಾಣಕ್ಕೆ ನೀಡುತ್ತಿರುವ ಎಲ್‌ಐಸಿ ಯನ್ನು ಸರಕಾರ ಯಾಕೆ ಖಾಸಗೀಕರಣ ಮಾಡಬೇಕು. ಎಲ್‌ಐಸಿಯು ಜನರ ಉಳಿತಾಯದ ಹಣವನ್ನು ಸರಕಾರದ ಯೋಜನೆಗಳಿಗೆ ಅನುಕೂಲ ಮಾಡಿ ಕೊಡುತ್ತಿದೆ. ವಿಶ್ವ ಬ್ಯಾಂಕ್ ನೀಡಿರುವ ವರದಿ ಯಂತೆ ಯಾವುದೇ ದೇಶವು ವಿದೇಶಿ ನೇರ ಬಂಡಾವಳದಿಂದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಆ ದೇಶದ ಜನರ ಆರ್ಥಿಕ ಉಳಿತಾಯದಿಂದ ಮಾತ್ರ ಆ ದೇಶದ ಪ್ರಗತಿ ಹೊಂದಲು ಸಾಧ್ಯ. ಸ್ವದೇಶಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಈ ಸರಕಾರಕ್ಕೆ ಇದೆಲ್ಲ ಯಾಕೆ ಅರ್ಥ ಆಗುವುದಿಲ್ಲ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News