ಅನನ್ಯ ಜ್ಞಾನ ಸಂಪನ್ನ ವಿಶ್ವಗುರು ವಾಲ್ಮೀಕಿ: ನಳಿನ್ ಕುಮಾರ್ ಕಟೀಲ್

Update: 2019-10-13 11:32 GMT

ಮಂಗಳೂರು, ಅ.13: ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿ ಜಾತಿ, ಮತ, ಪಂಥ, ಧರ್ಮ ಮೀರಿದ, ಅನನ್ಯ ಜ್ಞಾನ ಸಂಪನ್ನ ವಿಶ್ವಗುರು ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ದ.ಕ. ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ದ.ಕ. ಜಿಲ್ಲೆ ವಾಲ್ಮೀಕಿ-ನಾಯಕ ಅಸೋಸಿಯೇಶನ್ ವತಿಯಿಂದ ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ರವಿವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವಾಲ್ಮೀಕಿಗೆ ಅಖಂಡ ಭಾರತದ ಕಲ್ಪನೆ ಇತ್ತು. ಭಾರತದ ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಕೊಂಡಿಯಾಗಿ ರಾಮಾಯಣವನ್ನು ಅವರು ರಚಿಸಿದ್ದಾರೆ. ಉತ್ತರ ಭಾರತ, ದಕ್ಷಿಣ ಭಾರತ, ಶ್ರೀಲಂಕಾದ ಅರಿವು ಇಲ್ಲದೆ ವಾಲ್ಮೀಕಿಗೆ ರಾಮಾಯಣದ ರಚನೆ ಸಾಧ್ಯವಾಗುತ್ತಿರಲಿಲ್ಲ. ರಾಮಾಯಣದಲ್ಲಿರುವ ಪ್ರದೇಶದ ವರ್ಣನೆಗಳೇ ಅದು ಕಾಲ್ಪನಿಕ ಅಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಮಾತನಾಡಿ, ಭಾರತದ ಎಲ್ಲ ಜನರಿಂದಲೂ ಶ್ರೀರಾಮ ಗೌರವಕ್ಕೆ ಪಾತ್ರರಾಗಿದ್ದಾನೆ. ಶ್ರೀರಾಮನ ಆದರ್ಶಗಳನ್ನು ಜನರಿಗೆ ತಿಳಿಸುವಲ್ಲಿ ವಾಲ್ಮೀಕಿ ಮಹರ್ಷಿ ಬರೆದ ‘ರಾಮಾಯಣ’ ಮಹತ್ವದ ಪಾತ್ರ ವಹಿಸಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿದರು.

ದ.ಕ. ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ದನ ಗೌಡ, ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್, ಜಿಪಂ ಸಿಇಒ ಡಾ.ಆರ್.ಸೆಲ್ವಮಣಿ, ವಾಲ್ಮೀಕಿ ಸಂಘದ ಅಧ್ಯಕ್ಷ ಹಾಲೇಶಪ್ಪ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಜಯರಾಜ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಯೋಗೇಶ್ ಸ್ವಾಗತಿಸಿದರು.

ವಿವಿಧ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳಿಸಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ವಿವಿಧ ಇಲಾಖೆಗಳ ಲಾನುಭವಿಗಳಿಗೆ ಸೌಲಭ್ಯ ವಿತರಣೆ ನಡೆಯಿತು. ಪರಿಶಿಷ್ಟ ವರ್ಗದ ವಿವಿಧ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News