ತಂತ್ರಜ್ಞಾನ ಇಂದಿನ ಅಗತ್ಯ: ಪ್ರವೀಣ್ ಕಲ್ಬಾವಿ

Update: 2019-10-13 11:39 GMT

ಮಂಗಳೂರು, ಅ.12: ಇಂದಿನ ಯುಗದ ತಂತ್ರಜ್ಞಾನಗಳು ಮಾನವರಿಗಿಂತ ಹೆಚ್ಚು ಚುರುಕಾಗಿವೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಯುವಜನತೆ ಕಂಪ್ಯೂಟರ್ ಪ್ರೊಗ್ರಾಮಿಂಗ್ ಕೌಶಲ್ಯ ಮಾತ್ರವಲ್ಲದೆ, ತಂತ್ರಜ್ಞಾನದಲ್ಲಾಗುವ ಇತ್ತೀಚಿನ ಪ್ರಗತಿಯ ಜ್ಞಾನ ಹೊಂದಿರಬೇಕು ಎಂದು ಮಂಗಳೂರಿನ ನೊವಿಗೋ ಸೊಲ್ಯುಶನ್ ಪ್ರೈ.ಲಿ.ನ ಸಿಎಂಡಿ ಹಾಗೂ ಸಿಇಒ ಪ್ರವೀಣ್ ಕಲ್ಬಾವಿ ಹೇಳಿದ್ದಾರೆ.

ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್‌ನಲ್ಲಿ ಶನಿವಾರ ನಡೆದ ಮಾಹಿತಿ ತಂತ್ರಜ್ಞಾನ, ನಿರ್ವಹಣೆ, ಶಿಕ್ಷಣ ಮತ್ತು ಸಮಾಜ ವಿಜ್ಞಾನದಲ್ಲಿ ತಾಂತ್ರಿಕ ಅವಿಷ್ಕಾರಗಳ ಇತ್ತೀಚಿನ ಪ್ರಗತಿಗಳು ಎಂಬ ರಾಷ್ಟ್ರೀಯ ಸಮ್ಮೇಳನದ ಉದ್ಘಾಟಿಸಿ ಅವರು ಮಾತನಾಡಿದರು.

ಆರ್ಟಿಫಿಶಿಲ್ ಇಂಟಲಿಜನ್ಸ್, ಮೆಷಿನ್ ಲರ್ನಿಂಗ್ ಮತ್ತು ಕ್ಲೌಡ್ ತಂತ್ರಜ್ಞಾನದ ವಿಷಯಗಳನ್ನು ವಿವರಿಸುವ ಮೂಲಕ ತಂತ್ರಜ್ಞಾನದಲ್ಲಿನ ಪ್ರಗತಿಗಳ ಬಗ್ಗೆ ಅವರು ವಿವರಿಸಿದರು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಭವಿಷ್ಯದ ತಂತ್ರಜ್ಞಾನಗಳಲ್ಲಿ ತಮ್ಮ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಸ್. ಐತಾಳ್ ಮಾತನಾಡಿ, ಮೆಷಿನ್ ಲರ್ನಿಂಗ್ ಮತ್ತು ನ್ಯಾನೋ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ನೀಡಿದರು.

ಸಮ್ಮೇಳನದಲ್ಲಿ ಮಂಡಿಸಲಾದ ಸಂಶೋಧನಾ ಪ್ರಬಂಧಗಳ ಕೈಪಿಡಿ ಹಾಗೂ ಹಿಂದಿನ ಸಮ್ಮೇಳನದಲ್ಲಿ ಮಂಡಿಸಿದ ಸಂಶೋಧನೆಗಳ ಸಮಗ್ರ ಪ್ರಬಂಧ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.

ವೇದಿಕೆಯಲ್ಲಿ ಶ್ರೀನಿವಾಸ್ ಕಾಲೇಜ್ ಆಫ್ ಕಂಪ್ಯೂಟರ್ ಆ್ಯಂಡ್ ಇನ್‌ಫಾರ್ಮೇಷನ್ ಸೈನ್ಸ್‌ನ ಡೀನ್ ಪ್ರೊ.ಶ್ರೀಧರ ಆಚಾರ್ಯ, ವಿಚಾರ ಸಮ್ಮೇಳನದ ಸಂಯೋಜಕ ಡಾ. ಕೃಷ್ಣ ಪ್ರಸಾದ್ ಕೆ. ಉಪಸ್ಥಿತರಿದ್ದರು. ರಾಷ್ಟ್ರೀಯ ಸಮ್ಮೇಳನದಲ್ಲಿ ವಿವಿಧ ಕಾಲೇಜಿನ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ವೃತ್ತಿಪರರು ಸಂಶೋಧನಾ ವಿಚಾರಗಳನ್ನು ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News