ಅ. 14ರಂದು ಕದ್ರಿ ಗೋಪಾಲ್‌ನಾಥ್ ಅಂತ್ಯಕ್ರಿಯೆ: ಸಂಸದರಿಂದ ವ್ಯವಸ್ಥೆ ಪರಿಶೀಲನೆ

Update: 2019-10-13 11:43 GMT

ಮಂಗಳೂರು:  ಖ್ಯಾತ ಸ್ಯಾಕ್ಸೋಪೋನ್ ವಾದಕ, ಪದ್ಮಶ್ರೀ ಪುರಸ್ಕೃತ ಡಾ. ಕದ್ರಿ ಗೋಪಾಲ್‌ನಾಥ್‌ರವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವದೊಂದಿಗೆ ಅ. 14 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್  ಅಧಿಕಾರಿಗಳೊಂದಿಗೆ ಸಭೆ ನಡೆಸಿ ವ್ಯವಸ್ಥೆಯ ಕುರಿತಂತೆ ಚರ್ಚಿಸಿದರು.

ಕದ್ರಿ ಗೋಪಾಲನಾಥ್ ಅವರ ಪಾರ್ಥೀವ ಶರೀರವನ್ನು ನಗರದ ಮಿನಿ ಪುರಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಮಿನಿ ಪುರಭವನಕ್ಕೆ ಭೇಟಿ ನೀಡಿದ ಸಂಸದರು ಅಲ್ಲಿಯ ವ್ಯವಸ್ಥೆಯ ಕುರಿತು ಪರಿಶೀಲಿಸಿದರು.

ಕದ್ರಿ ಗೋಪಾಲನಾಥ್ ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಅ.14ರಂದು ಮಂಗಳೂರಿನ ಪದವಿನಂಗಡಿ ದೇವಿಕಟ್ಟೆಯ  ನಿವಾಸ ದಿಂದ ಬೆಳಿಗ್ಗೆ 9ಕ್ಕೆ ಹೊರಟು ಮಿನಿ ಪುರಭವನದ ತಲುಪಲಿದೆ, 10ರಿಂದ ಮಧ್ಯಾಹ್ನ 2ರ ತನಕ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದೇ ವೇಳೆ ಮಿನಿ ಪುರಭವನದ ವೇದಿಕೆಯಲ್ಲಿ ವಾದ್ಯ ಹಾಗೂ ಸಂಗೀತ ಗೋಷ್ಠಿಯ ಸ್ವರಾಂಜಲಿ ಕಾರ್ಯಕ್ರಮ ಕದ್ರಿ ಗೋಪಾಲನಾಥರ ಶಿಷ್ಯರು ಹಾಗೂ ಇತರರಿಂದ ನಡೆಯಲಿದೆ ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದರು.

ಅಂತಿಮ ದರ್ಶನಕ್ಕೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಳಿಕ ಮೃತರ ಹುಟ್ಟೂರು ಬಂಟ್ವಾಳದ ಸಜಿಪದಲ್ಲಿ ಅಂತಿಮ ಕ್ರಿಯೆ ಸಕಲ ಸರಕಾರಿ ಮಾರ್ಯದೆಯೊಂದಿಗೆ ಜೋಗಿ ಸಮಾಜದ ಸಂಪ್ರದಾಯದಂತೆ ನಡೆಯಲಿದೆ. ಪೂರಕ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮಾಡಲಿದೆ.

ಮಂಗಳೂರು ಮಹಾನಗರ ಪಾಲಿಕೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇಗೌಡ, ಜೂನಿಯರ್ ಇಂಜಿನಿಯರ್ ರಘುಪಾಲ್, ಪಾಲಿಕೆಯ ಮಾಜಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ರಾಜೇಶ್ ಕೆ. ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News