ಅಂಚೆಚೀಟಿ, ನಾಣ್ಯ ಸಂಗ್ರಹಿಸುವ ಹವ್ಯಾಸವಿರಲಿ: ದ.ಕ. ಜಿಲ್ಲಾಧಿಕಾರಿ ಸಿಂಧೂ

Update: 2019-10-13 12:14 GMT

ಮಂಗಳೂರು, ಅ.13: ಅಂಚೆ ಚೀಟಿ ಮತ್ತು ನಾಣ್ಯಗಳಿಗೆ ಇತಿಹಾಸವಿದ್ದು, ಸಂಶೋಧನೆಯ ಆಕರಗಳಾಗಿವೆ. ಚಿಕ್ಕಂದಿನಿಂದಲೇ ಅಂಚೆ ಚೀಟಿ ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಕರ್ನಾಟಕ ಅಂಚೆ ವೃತ್ತದ ವತಿಯಿಂದ ನಗರದ ಎಂ.ಜಿ. ರಸ್ತೆಯ ಡಾ.ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ 12ನೇ ಅಂಚೆ ಚೀಟಿ ಪ್ರದರ್ಶನ ‘ಕರ್ನಾಪೆಕ್ಸ್- 2019’ನಲ್ಲಿ ಎರಡನೇ ದಿನವಾದ ರವಿವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.

ಅಂಚೆ ಚೀಟಿ ಮತ್ತು ನಾಣ್ಯಗಳ ಅಧ್ಯಯನ ಮಾಡುತ್ತಾ ಹೋದರೆ ಕುತೂಹಲ ಕೆರಳಿಸುತ್ತದೆ. ಮಕ್ಕಳನ್ನು ಕರೆದೊಯ್ದು ಈ ಪ್ರದರ್ಶನವನ್ನು ತೋರಿಸಬೇಕು ಎಂದು ಹೇಳಿದರು.

ಅಂಚೆ ಇಲಾಖೆ ಹೊರ ತಂದ ‘ಅಂಚೆಚೀಟಿಯಲ್ಲಿ ಕನ್ನಡ ಅಕ್ಷರಮಾಲೆ’ ಪುಸ್ತಕವನ್ನು ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಈ ಪುಸ್ತಕವನ್ನು ಎಲ್ಲ ಶಾಲೆಗಳಿಗೆ ಹಂಚಬೇಕು ಎಂದು ಸಲಹೆ ನೀಡಿದರು.

ಗೌರವ ಅತಿಥಿಯಾಗಿದ್ದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಪ್ರೊ.ಡಾ.ಹರೀಶ್ ಜೋಶಿ ಮಾತನಾಡಿ, ತಾನು ಜಪಾನ್ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳ ಸಹಕಾರದಲ್ಲಿ ನಗರದ ಅಡ್ಯಾರ್‌ನಲ್ಲಿ ಕಂಡು ಹಿಡಿದ ಹೊಸ ಪ್ರಬೇಧದ ಕಪ್ಪೆ ಯುಕ್ಲಿಪ್ಟಿಸ್ ಅಲೋಸಿ ಮತ್ತು ಇತರ ಕಪ್ಪೆಗಳ ಕುರಿತು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಕಪ್ಪೆಗಳು ವಹಿಸುತ್ತಿರುವ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಸಮ್ಮಾನ: ಹಿರಿಯ ಅಂಚೆ ಚೀಟಿ ಸಂಗ್ರಾಹಕರಾದ ಎಂ.ಕೆ. ಕೃಷ್ಣಯ್ಯ, ಡಾ.ಕೆ.ಎಸ್. ಪ್ರಭಾಕರ ರಾವ್, ಎಸ್. ನಾರಾಯಣ ರಾವ್ ಮತ್ತು ಎಂ.ಆರ್. ಪಾವಂಜೆ ಅವರನ್ನು ಸಮ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಪೋಸ್ಟ್ ಮಾಸ್ಟರ್ ಜನರಲ್ ಅರವಿಂದ ವರ್ಮ ಮಾತನಾಡಿ, ಅಂಚೆ ಚೀಟಿಗಳು ಅಂತಾರಾಷ್ಟ್ರೀಯ ರಾಯಭಾರಿಗಳಾಗಿದ್ದು, ಆಯಾ ಪ್ರದೇಶದ ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳನ್ನು ಪ್ರತಿಪಾದಿಸುತ್ತವೆ. ಅವುಗಳಿಗೆ ಹೆಚ್ಚಿನ ಮಹತ್ವವಿದೆ ಎಂದರು.

ಆರ್.ಎಂ.ಎಸ್. ಸೀನಿಯರ್ ಸೂಪರಿಂಟೆಂಡೆಂಟ್ ಸಂದೇಶ್ ಮಹಾದೇವಪ್ಪ ಸ್ವಾಗತಿಸಿದರು. ಅಂಚೆ ಇಲಾಖೆಯ ಬೆಂಗಳೂರು ದಕ್ಷಿಣ ವಿಭಾಗದ ಸೀನಿಯರ್ ಸೂಪರಿಂಟೆಂಡೆಂಟ್ ಟಿ. ಎಸ್. ಅಶ್ವತ್ಥ ನಾರಾಯಣ ವಂದಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.

3 ವಿಶೇಷ ಅಂಚೆ ಲಕೋಟೆ ಬಿಡುಗಡೆ

ಪರಿಸರ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಕರಾವಳಿಯ ಪರಿಸರಕ್ಕೆ ಸಂಬಂಧಿಸಿದ ‘ಮಟ್ಟು ಗುಳ್ಳ’, ‘ಶಂಕರಪುರ ಮಲ್ಲಿಗೆ’ ಮತ್ತು ‘ಯುಪ್ಲಿಕ್ಟಿಸ್ ಅಲೋಸಿ’ ಎಂಬ ಹೊಸ ಪ್ರಭೇಧದ ಕಪ್ಪೆಗೆ ಸಂಬಂಧಿಸಿದ ವಿಶೇಷ ಅಂಚೆ ಲಕೋಟೆಗಳನ್ನು ಈ ಸಂದರ್ಭದಲ್ಲಿ ಅನಾವರಣ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News