ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ನೀರಾ ಘಟಕ ಸ್ಥಾಪಿಸಲು ಯೋಜನೆ

Update: 2019-10-13 12:22 GMT

ಪಡುಬಿದ್ರಿ, ಅ.13: ಉಡುಪಿ ಮತ್ತು ಮಂಗಳೂರಿನಲ್ಲಿ ಪ್ರತ್ಯೇಕವಾಗಿ ಶೇಂದಿಯನ್ನು ನೀರಾ ಆಗಿ ಪರಿವರ್ತಿಸುವ ಘಟಕವನ್ನು ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಅದಕ್ಕಾಗಿ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡಿ ಯೋಜನೆ ರೂಪಿಸ ಲಾಗುವುದು ಎಂದು ರಾಜ್ಯ ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾ ಮಂಡಲ ಹಾಗೂ ಉಭಯ ಜಿಲ್ಲಾ ಸಮಸ್ತ ಮೂರ್ತೆದಾರರ ಸಹಕಾರಿ ಸಂಘಗಳ ವತಿಯಿಂದ ಪಡುಬಿದ್ರಿ ಸಾಯಿ ಆರ್ಕೇಡ್‌ನಲ್ಲಿ ರವಿವಾರ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಈ ಯೋಜನೆ ಸಂಬಂಧ ತಕ್ಷಣ ಒಂದು ಕೋಟಿ ರೂ. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲಾಗುವುದು. ಮೂರ್ತೆ ದಾರರ ನಿಯೋಗ ಬೆಂಗಳೂರಿಗೆ ಬಂದರೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅವಿಭಜಿತ ಜಿಲ್ಲೆಯಲ್ಲಿ ತೆಗೆಯುವ ಶೇಂದಿಯನ್ನು ನೀರಾ ಆಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಶೇಂದಿಯನ್ನು ಸಂಸ್ಕರಿಸಿ ಅತ್ಯಾಧುನಿಕ ರೀತಿಯಲ್ಲಿ ಮಾರಾಟ ಮಾಡಲು ಬೇಕಾದ ಯೋಜನೆ ರೂಪಿಸಿಕೊಳ್ಳಬಹುದು ಎಂದರು.

ಮೂರ್ತೆದಾರರಿಗೆ ಯಾವುದೇ ರೀತಿ ಕಿರುಕುಳ ಆಗದ ರೀತಿಯಲ್ಲಿ ರಾಜ್ಯ ಸರಕಾರ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲಿದೆ. ಕಲ್ಪತರು ಮಹಿಳಾ ಸ್ವಸಹಾಯ ಸಂಘಗಳಿಗೆ ನಿಬಡ್ಡಿ ಸಾಲವನ್ನು ನಾರಾಯಣಗುರು ನಿಗಮ ಮತ್ತು ಮೂರ್ತೆ ದಾರರ ಮಹಾಮಂಡಲ ಮೂಲಕ ನೀಡಬೇಕೆಂಬ ಪ್ರಸ್ತಾಪ ಸರಕಾರದ ಮುಂದೆ ಇದೆ ಎಂದು ಅವರು ತಿಳಿಸಿದರು.

ಮೂರ್ತೆದಾರರ ಚಳುವಳಿಯ ನೇತಾರ ಮಾಣಿ ಗೋಪಾಲ ಕುಂದಾಪುರ ಅಭಿನಂದನಾ ಭಾಷಣ ಮಾಡಿದರು. ಧನಂಜಯ ಕೊಲ್ಯ ಭಾಮಿನಿ ಷಠ್ಪದಿ ಯಲ್ಲಿ ಸಚಿವರನ್ನು ಪರಿಚಯಿಸಿದರು. ವಿಜಯಕುಮಾರ್ ಕುಬೆವೂರು ಸನ್ಮಾನ ಪತ್ರ ವಾಚಿಸಿದರು. ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಅಧ್ಯಕ್ಷ ಕೊರಗ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಮೂರ್ತೆದಾರರ ಚಳುವಳಿಯ ನೇತಾರ ನಾರಾಯಣ ಪೂಜಾರಿ ಮೂಡು ಪೆರಾರ, ದಕ್ಷಿಣಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಉಪಾಧ್ಯಕ್ಷ ಶಿವಪ್ಪ ಸುವರ್ಣ ಉಪಸ್ಥಿತರಿದ್ದರು. ಮಹಾಮಂಡಲ ಉಪಾಧ್ಯಕ್ಷ ಪಿ.ಕೆ.ಸದಾನಂದ ಸ್ವಾಗತಿಸಿದರು. ದ.ಕ. ಜಿಲ್ಲಾಮಹಾಮಂಡಲ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ ವಂದಿಸಿದರು. ಜಗದೀಶ ಕೆಮಣ್ಣು ಕಾರ್ಯಕ್ರಮ ನಿರೂಪಿಸಿದರು.

ಮೂರ್ತೆದಾರರ ವಿವಿಧ ಬೇಡಿಕೆಗಳು

ಮೂರ್ತೆದಾರರ ಮಹಾಮಂಡಲ ಹಾಗೂ ಸಹಕಾರಿ ಸಂಘಗಳನ್ನು ಬಲ ಪಡಿಸಲು 10 ಕೋಟಿ ರೂ. ಸಹಾಯಧನವನ್ನು ಸರಕಾರ ತಕ್ಷಣ ಮಂಜೂರು ಮಾಡಬೇಕು. ಮೂರ್ತೆದಾರರ ಸಹಕಾರಿ ಸಂಘಗಳ ಶೇಂದಿ ಮಾರಾಟ ಕೇಂದ್ರಗಳಿಗೆ ಸುಲಭ ಹಾಗೂ ಶೀಘ್ರ ಪರವಾನಿಗೆ ನೀಡಬೇಕು. ಅದರ ಕಾರ್ಯ ಕ್ಷೇತ್ರದಲ್ಲಿ ಸರಕಾರಿ ಜಮೀನು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕು. ಮೂರ್ತೆದಾರರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ, ಸರಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಸಮಾಪನ ಗೊಂಡ ತಾಳೆಬೆಲ್ಲ ಸಹಕಾರಿ ಸಂಘದ ನಿಧಿಯನ್ನು ಸಂಬಂಧಪಟ್ಟ ಮೂರ್ತೆ ದಾರರ ಮಹಾಮಂಡಲ ಅಥವಾ ಸಹಕಾರಿ ಸಂಘಗಳಿಗೆ ವರ್ಗಾಯಿಸಲು ಸಹಕಾರಿ ಸಂಘಗಳ ಉಪನಿಬಂಧಕರಿಗೆ ಆದೇಶಿಸಬೇಕು ಎಂಬ ಬೇಡಿಕೆಗಳ ಪಟ್ಟಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News