ನಂತೂರು: ಪ್ರತಿಭಟನೆಯ ಬಳಿಕ ರಸ್ತೆ ಗುಂಡಿಗೆ ‘ತೇಪೆ’ ಕಾರ್ಯ

Update: 2019-10-13 12:26 GMT

ಮಂಗಳೂರು, ಅ.13: ಸಾಮಾಜಿಕ ಹೋರಾಟಗಾರ, ಎಂಸಿಸಿ ಸಿವಿಕ್ ಗ್ರೂಪ್ ಸದಸ್ಯ ದೇರೆಬೈಲ್‌ನ ಅರ್ಜುನ್ ಮಸ್ಕರೇನಸ್ ಶನಿವಾರ ನಗರದ ನಂತೂರು ಸರ್ಕಲ್ ಬಳಿ ಏಕಾಂಗಿ ಹೋರಾಟ ಎಂಬಂತೆ ಮೌನ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ. ಈ ಮಧ್ಯೆ ಶನಿವಾರ ರಾತ್ರಿ 9 ಗಂಟೆಯ ವೇಳೆಗೆ ಈ ವೃತ್ತದ ಬಳಿ ‘ತೇಪೆ’ ಕಾರ್ಯ ನಡೆಸಲಾಗಿದೆ.

ನಗರದ ಒಳಗಡೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಗುಂಡಿಗಳು ಪ್ರಾಣ ಹಿಂಡುತ್ತಿವೆ. ಮಳೆ ಕಡಿಮೆಯಾದರೂ ಕೂಡ ಸರಿಪಡಿಸಲಾ ಗುತ್ತಿಲ್ಲ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ನೀಡಿದ ಮನವಿಗೆ ಬೆಲೆಯೇ ಇಲ್ಲ ಎಂದು ಆರೋಪಿಸಿ ಅರ್ಜುನ್ ಮಸ್ಕರೇನಸ್ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅರ್ಜುನ್ ಮಸ್ಕರೇಜ್ಞಸ್ ರಸ್ತೆ ತಡೆ, ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಬದಲು ಏಕಾಂಗಿ ಹೋರಾಟಗೈದು ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೆ. ಈ ರೀತಿಯ ಹೋರಾಟದಿಂದ ಅಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೆ ಮನಪಾಕ್ಕೆ ಮನವಿ ಸಲ್ಲಿಸಿದ್ದೆ. ಪ್ರಯೋಜನವಾಗಿಲ್ಲ. ಬೆಳಗ್ಗಿನಿಂದ ಸಂಜೆಯವರೆಗೆ ವೌನ ಪ್ರತಿಭಟನೆ ನಡೆಸಿದ್ದಕ್ಕೋ ಏನೋ, ರಾತ್ರಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ‘ತೇಪೆ’ ಕಾರ್ಯ ನಡೆಸಿದೆ. ಇದು ನನಗೆ ಸಮಾಧಾನ ತಂದಿಲ್ಲ. ಸೋಮವಾರ ಎನ್‌ಎಚ್‌ಐ ಅಧಿಕಾರಿಗಳಿಗೆ ಮನವಿ ಸಲ್ಲಿಸುವೆ. ಅಲ್ಲದೆ ನ್ಯಾಯ ಸಿಗುವವರೆಗೆ ಏಕಾಂಗಿ ಹೋರಾಟ ಎಂದಿದ್ದಾರೆ.

ಮೂನ್ ವಾಕ್

ನಂತೂರು ಸರ್ಕಲ್‌ನಲ್ಲಿ ಶನಿವಾರ ಏಕಾಂಗಿ ಹೋರಾಟ ನಡೆಸಿದ್ದ ಎಂಸಿಸಿ ಸಿವಿಕ್ ಗ್ರೂಪ್ ಸದಸ್ಯರಾದ ಅರ್ಜುನ್ ಮಸ್ಕರೇನಸ್ ಮತ್ತು ಅಜೇಯ್ ಡಿಸಿಲ್ವ ಅವರು 6ನೇ ತರಗತಿ ವಿದ್ಯಾರ್ಥಿನಿ ಆ್ಯಡ್ಲಿನ್ ಡಿಸಿಲ್ವ ಜತೆಗೂಡಿ ನಗರದ ಕೇಂದ್ರ ಮಾರ್ಕೆಟ್‌ನಲ್ಲಿ ಸೆ.20ರಂದು ಮೂನ್‌ವಾಕ್ ಮೂಲಕ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News