ಹೈಲಾಕಾಂಡಿ ಗುಂಪು ದಾಳಿ ಪ್ರಕರಣ: 9 ಮಂದಿಯ ಬಂಧನ

Update: 2019-10-13 14:48 GMT

ಗುವಾಹಟಿ, ಅ.13: ಶುಕ್ರವಾರ ಅಸ್ಸಾಂನ ಹೈಲಾಕಾಂಡಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ನಡೆದ ಗುಂಪು ದಾಳಿ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಸಹಿತ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುಂಪು ಹಲ್ಲೆಯಲ್ಲಿ 12 ಪೊಲೀಸರು ಹಾಗೂ ಕೆಲವು ಗ್ರಾಮಸ್ಥರು ಗಾಯಗೊಂಡಿದ್ದರು. ಶುಕ್ರವಾರ ಸೊನಾಯ್ ಗ್ರಾಮದಿಂದ ಎಮ್ಮೆಯೊಂದನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಸ್ಥಳೀಯ 8 ಜನ ಹಾಗೂ ಸಮವಸ್ತ್ರ ಧರಿಸದ ಪೊಲೀಸ್ ಸಿಬಂದಿ ಎಮ್ಮೆಯನ್ನು ಪತ್ತೆಹಚ್ಚಲು ಹೈಲಾಕಾಂಡಿಗೆ ತೆರಳಿದ್ದರು.

 ಅಲ್ಲಿ ಜಾನುವಾರು ಮಾರುಕಟ್ಟೆಯಲ್ಲಿ ಕಳವಾದ ಎಮ್ಮೆಯನ್ನು ಪತ್ತೆಹಚ್ಚಿ ಅದನ್ನು ವಶಕ್ಕೆ ಪಡೆಯಲು ಮುಂದಾದಾಗ ಅಲ್ಲಿದ್ದ ಜನರು ತಡೆದಿದ್ದಾರೆ. ಈ ಸಂದರ್ಭ ಪೊಲೀಸ್ ಹಾಗೂ ಜತೆಗಿದ್ದವರು ಎಮ್ಮೆ ಕದ್ದ ಆರೋಪಿಯ ಮಗುವನ್ನು ಕರೆದೊಯ್ಯಲು ಮುಂದಾದಾಗ, ಅಲ್ಲಿದ್ದವರು ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಗಲಭೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಹಲ್ಲೆಗೊಳಗಾದವರನ್ನು ರಕ್ಷಿಸಿದ್ದಾರೆ. ಆಗ ಉದ್ರಿಕ್ತ ಗುಂಪು ಪೊಲೀಸರ ಮೇಲೆಯೂ ಹಲ್ಲೆ ನಡೆಸಿದೆ.

ಈ ಘಟನೆಯಲ್ಲಿ 12 ಪೊಲೀಸರು ಹಾಗೂ ಹಲವು ಗ್ರಾಮಸ್ಥರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸ್ ಕಾನ್‌ಸ್ಟೇಬಲ್ ಫಿರೋಝ್ ಅಹ್ಮದ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News