ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧ : ಆರ್‌ಎಸ್‌ಎಸ್- ಬಿಜೆಪಿ ನಡುವಿನ ತಿಕ್ಕಾಟ - ಐವನ್ ಡಿಸೋಜಾ ಆರೋಪ

Update: 2019-10-14 10:53 GMT

ಮಂಗಳೂರು, ಅ.14: ವಿಧಾನಸಭಾ ಕಲಾಪ ಚಿತ್ರೀಕರಿಸಲು ಮಾಧ್ಯಮಗಳಿಗೆ ಅವಕಾಶ ನಿರಾಕರಣೆಯ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ತಿಕ್ಕಾಟವಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಮಾಧ್ಯಮಗಳಿಗೆ ಅಡ್ಡಿಪಡಿಸುವುದಿಲ್ಲ ಎನ್ನುತ್ತಾರೆ, ಸ್ಪೀಕರ್ ಮಾಧ್ಯಮಗಳಿಗೆ ಅವಕಾಶವಿಲ್ಲ ಎನ್ನುತ್ತಾರೆ. ಯಡಿಯೂರಪ್ಪ ಬಿಜೆಪಿ ಪ್ರತಿನಿಧಿಸುತ್ತಿದ್ದರೆ ಸ್ಪೀಕರ್ ಆರ್ ಎಸ್ ಎಸ್ ಪ್ರತಿನಿಧಿಸುತ್ತಿದ್ದಾರೆ. ಇದು ಆರ್ ಎಸ್ ಎಸ್ ಮತ್ತು ಬಿಜೆಪಿ ನಡುವಿನ ತಿಕ್ಕಾಟವಾಗಿದೆ. ರಾಜ್ಯದಲ್ಲಿ ಜನಪರ ಸರಕಾರ ಇಲ್ಲ ಎಂದು ಅವರು ಹೇಳಿದರು.

ಕೋರ್ಟ್‌ಗಳಲ್ಲಿಯೂ ಕಲಾಪ ನೇರ ಪ್ರಸಾರ ಮಾಡಲಾಗುತ್ತದೆ. ಇಂತಹದರಲ್ಲಿ ಜನರಿಗೆ ಜನರು ಆಯ್ಕೆ ಮಾಡಿದ ಜನಪ್ರತಿನಿಧಿಗಳು ಏನು ಮಾಡುತ್ತಾರೆ ಎಂಬುದು ತಿಳಿಯುವ ಹಕ್ಕಿಲ್ಲವೆ ಎಂದು ಅವರು ಪ್ರಶ್ನಿಸಿದರು.

ಮೋದಿ ಕ್ಯಾಮರ ಪ್ರಾಜೆಕ್ಷನ್ ಪ್ರೈಮ್ ಮಿನಿಸ್ಟರ್

ಪ್ರಧಾನಮಂತ್ರಿಗಳು ವಾಕಿಂಗ್ ಹೊಗುತ್ತಾರೆಂದರೆ, ಕಸ ಎಲ್ಲ ತೆಗೆದಿರುತ್ತಾರೆ. ಆದರೆ ಕ್ಯಾಮರ ಪ್ರಾಜೆಕ್ಸನ್ ಆದ್ಯತೆಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ತಾನೇ ಕಸ ಹಾಕಿ ತಾನೇ ಹೆಕ್ಕಿ ನಾಟಕ ಶುರು ಮಾಡಿದ್ದಾರೆ ಎಂದು ಐವನ್ ಡಿಸೋಜಾ ಆರೋಪಿಸಿದರು.

ರಾಜ್ಯದ ಬೇಡಿಕೆಗಳಿಗೆ ಪ್ರಧಾನಮಂತ್ರಿ ಸ್ಪಂದಿಸುತ್ತಿಲ್ಲ. ರಾಜ್ಯಕ್ಕೆ ಭೇಟಿ ಕೊಟ್ಟಿಲ್ಲ, ಪರಿಹಾರ ಎಷ್ಟು ಬೇಕು ಅಂತ ಕೇಳಿಲ್ಲ. ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಬೇಕೆಂಬ ಕಾಳಜಿ ಇಲ್ಲ. ಚೀನಾ ದೇಶದ ಅಧ್ಯಕ್ಷರು ಭಾರತಕ್ಕೆ ಬಂದಾಗ ಎಳನೀರು ಕುಡಿಸಲು ಕಳುಹಿಸಿದ್ದಾರೆ. ಡೋಕ್ಲೋಮ್, ಪಾಕ್‌ ಉಗ್ರವಾದ, ದೇಶದ ಆರ್ಥಿಕ ಕುಸಿತ, ಕೈಗಾರಿಕೆ ಸ್ಥಾಪನೆ ಬಗ್ಗೆ ಚೈನಾ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿಲ್ಲ ಎಂದು ಐವನ್ ಡಿಸೋಜಾ ಆರೋಪಿಸಿದರು.

ನೆರೆಹಾನಿ ಪರಿಹಾರ ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಈ ಬಗ್ಗೆ ವಿಧಾನಸಭಾ ಅಧಿವೆಶನದಲ್ಲಿ ಚರ್ಚೆಗೆ ಅವಕಾಶ ಕೇಳಲಾಗಿತ್ತು. ರಾಜ್ಯದಲ್ಲಿ ನೆರೆ ಹಾನಿಯಿಂದ ಒಂದು ಲಕ್ಷ ಕೋಟಿ ರೂ ನಷ್ಟವಾಗಿದೆ ಎಂದು ರಾಜ್ಯ ಸರಕಾರವೇ ಹೇಳುತ್ತದೆ. ಎನ್ ಡಿ ಆರ್ ಎಫ್ ಪ್ರಕಾರ 35 ಸಾವಿರ ಕೋಟಿ ರೂ ನಷ್ಟವಾಗಿದೆ. ಆದರೆ ಕೇಂದ್ರ ಸರಕಾರ ಕೊಟ್ಟದು 1200 ಕೋಟಿ ರೂ. ಎಂದರು.

ಕೊಡಗು ಮಾದರಿಯಲ್ಲಿ ಪರಿಹಾರ ನೀಡಬೇಕು, ರೈತರು ತನ್ನನ್ನ ತಾನೇ ಗುಂಡಿಕ್ಕಿ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರದಿಂದ ದುಡ್ಡ ತರಲು, ರೈತರಿಗೆ ಪರಿಹಾರ ನೀಡಲು, ನೆರೆ ಸಂತ್ರಸ್ತರ ಕಣ್ಣೀರು ಒರಸಲು ಸರಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News