ಆರ್ಥಿಕ ಬೆಳವಣಿಗೆ ಹಿನ್ನಡೆಗೆ ಜಿಎಸ್‌ಟಿಯೂ ಕಾರಣ

Update: 2019-10-14 14:38 GMT

 ಹೊಸದಿಲ್ಲಿ,ಅ.14: ದೇಶದಲ್ಲಿ ಬೆಳವಣಿಗೆಯ ಮಂದಗತಿಯಲ್ಲಿ ಜಿಎಸ್‌ಟಿಯ ಪಾಲು ಇದೆ ಎಂದು ಖ್ಯಾತ ಆರ್ಥಿಕ ತಜ್ಞ ಹಾಗೂ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ(ಎಇಸಿ-ಪಿಎಂ)ಯ ಅಧ್ಯಕ್ಷ ಬಿಬೇಕ್ ದೇಬರಾಯ್ ಅವರು ಇತ್ತೀಚಿಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮುಂಗಡಪತ್ರದಲ್ಲಿ ನಿಗದಿಗೊಳಿಸಲಾಗಿರುವ ಶೇ.3.3ರ ವಿತ್ತೀಯ ಕೊರತೆ ಗುರಿಯನ್ನು ಸಾಧಿಸುವಲ್ಲಿ ಭಾರತವು ವಿಫಲಗೊಳ್ಳುವ ಸಾಧ್ಯತೆಯಿದೆ ಎಂದೂ ಅವರು ಹೇಳಿದ್ದಾರೆ.

 ಶೀಘ್ರವೇ ಅಥವಾ ನಂತರವಾದರೂ ಆದಾಯ ತೆರಿಗೆ ದರಗಳನ್ನು ಇಳಿಸುವುದು ಸರಕಾರಕ್ಕೆ ಅನಿವಾರ್ಯವಾಗಲಿದೆ ಎಂದೂ ಅವರು ಸುಳಿವು ನೀಡಿದ್ದಾರೆ.

ವಿತ್ತೀಯ ಕೊರತೆ ಎಷ್ಟಾಗುತ್ತದೋ ತನಗೆ ಗೊತ್ತಿಲ್ಲ,ಆದರೆ ಶೇ.3.3ರ ಗುರಿಯನ್ನು ಸಾಧಿಸುವುದು ಕಷ್ಟವಾಗಲಿದೆ ಎಂದು ದೇಬರಾಯ್ ಹೇಳಿದ್ದಾರೆ. ಇದರೊಂದಿಗೆ ನರೇಂದ್ರ ಮೋದಿ ಸರಕಾರವು ಆದಾಯ ಸಂಗ್ರಹವನ್ನು ಹೆಚ್ಚಿಸಲು ಹೆಣಗಾಡುತ್ತಿದೆ ಎನ್ನುವುದನ್ನು ಬಹುಶಃ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ.

ವಿತ್ತೀಯ ಕೊರತೆ ಅಂತಿಮವಾಗಿ ಎಷ್ಟಾಗಬಹುದು ಎಂಬ ಬಗ್ಗೆ ವಿವರಿಸಲು ನಿರಾಕರಿಸಿರುವ ದೇಬರಾಯ್,ಬೆಳವಣಿಗೆ ದರವು ಮುಂಗಡಪತ್ರದಲ್ಲಿ ಬಿಂಬಿಸಿರುವುದಕ್ಕಿಂತ ಕಡಿಮೆಯಾಗಿರುವುದರಿಂದ ವಿತ್ತೀಯ ಕೊರತೆ ಹೆಚ್ಚುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಕುಸಿಯುತ್ತಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ಈಗಾಗಲೇ ಕಾರ್ಪೊರೇಟ್ ತೆರಿಗೆಯನ್ನು ತಗ್ಗಿಸಿರುವ ಸರಕಾರವು ವೈಯಕ್ತಿಕ ಆದಾಯ ತೆರಿಗೆ ದರಗಳಲ್ಲಿ ಕಡಿತ ಮಾಡಲಿದೆಯೇ ಎಂಬ ಪ್ರಶ್ನೆಗೆ ಅವರು,ಅದು ಸಂಭವಿಸಲಿದೆ ಎಂದು ಉತ್ತರಿಸಿದ್ದಾರಾದರೂ ಅದಕ್ಕೆ ಯಾವುದೇ ಗಡುವನ್ನು ನೀಡಲಿಲ್ಲ.

ಜಾಗತಿಕ ಆರ್ಥಿಕ ಹಿಂಜರಿತದ ಜೊತೆಗೆ ಜಿಎಸ್‌ಟಿಯೂ ಬಹುಶಃ ಭಾರತದಲ್ಲಿ ಬೆಳವಣಿಗೆಯ ಮಂದಗತಿಗೆ ದೇಶಿಯ ಕಾರಣಗಳಲ್ಲಿ ಒಂದಾಗಿದೆ ಮತ್ತು ಈಗಲೂ ಹಿಂಜರಿತಕ್ಕೆ ತನ್ನ ಪಾಲನ್ನು ಅದು ಸಲ್ಲಿಸುತ್ತಿದೆ ಎಂದು ತಾನು ಭಾವಿಸಿದ್ದೇನೆ. ಆದರೆ ಶೇಕಡಾವಾರು ಲೆಕ್ಕದಲ್ಲಿ ಅದು ಬೆಳವಣಿಗೆಯನ್ನು ಎಷ್ಟು ಕುಂಠಿತಗೊಳಿಸಿದೆ ಎನ್ನುವುದನ್ನು ಅಂಕಿಅಂಶ ಗಳೊಂದಿಗೆ ಹೇಳುವುದು ಕಷ್ಟ ಎಂದಿದ್ದಾರೆ. ಅದೇನೇ ಇದ್ದರೂ,ಜಿಎಸ್‌ಟಿಯನ್ನು ಅನುಷ್ಠಾನಿಸಿದ ರೀತಿಯು ಆರ್ಥಿಕ ಮಂದಗತಿಗೆ ಪ್ರಮುಖ ಕಾರಣವಾಗಿತ್ತು ಎಂದು ಅವರು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News