ಭಾರತದ ಪ್ರಥಮ ಅಂಧ ಮಹಿಳಾ ಐಎಎಸ್ ಅಧಿಕಾರಿ ಈಗ ಇಲ್ಲಿನ ಉಪ ಆಯುಕ್ತೆ

Update: 2019-10-14 15:30 GMT

ತಿರುವನಂತಪುರಂ,ಅ.14: ದೇಶದ ಮೊದಲ ದೃಷ್ಟಿವಿಕಲಚೇತನ ಮಹಿಳಾ ಐಎಎಸ್ ಅಧಿಕಾರಿ ಪ್ರಾಂಜಲ್ ಪಟೀಲ್ ಅವರು ಕೇರಳದ ತಿರುವನಂತಪುರಂನ ಉಪ ಆಯಕ್ತೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕಳೆದ ವರ್ಷ ಕೇರಳದ ಎರ್ನಾಕುಲಂನ ಸಹಾಯಕ ಆಯುಕ್ತೆಯಾಗಿ ನೇಮಕಗೊಳ್ಳುವ ಮೂಲಕ ಪಾಟೀಲ್ ಇತಿಹಾಸ ನಿರ್ಮಿಸಿದ್ದರು. “ನಮ್ಮನ್ನು ಯಾರೂ ಸೋಲಿಸಲು ಬಿಡಬಾರದು. ನಾವು ಎಂದೂ ಕೈಚೆಲ್ಲಬಾರದು. ಯಾಕೆಂದರೆ, ನಮ್ಮೆಲ್ಲ ಪ್ರಯತ್ನದಿಂದ ನಾವು ಕಾಯುತ್ತಿರುವ ಆ ಒಂದು ಅವಕಾಶ ಖಂಡಿತವಾಗಿಯೂ ಸಿಗುತ್ತದೆ ಎಂದು ಉಪ ಆಯಕ್ತೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಪಾಟೀಲ್ ತಿಳಿಸಿದ್ದಾರೆ. ನಾನು ಈಗಷ್ಟೇ ತಿರುವನಂತಪುರಂಗೆ ವರ್ಗಾವಣೆಗೊಂಡಿದ್ದೇನೆ. ಸದ್ಯ ನಾನು ಜಿಲ್ಲೆಯನ್ನು ಅರಿಯಲು ಪ್ರಯತ್ನಿಸುತ್ತೇನೆ, ವಿವಿಧ ಇಲಾಖೆಗಳನ್ನು ಪರಿಶೀಲಿಸುತ್ತೇನೆ ಮತ್ತು ನಂತರ ಮುಂದಿನ ಕ್ರಮದ ಬಗ್ಗೆ ಯೋಜನೆ ರೂಪಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಹೊರತಾಗಿಯೂ ಪಾಟೀಲ್ ಅವರಿಗೆ 2016ರಲ್ಲಿ ಭಾರತೀಯ ರೈಲವೇ ಅಕೌಂಟಿಂಗ್ ಸೇವೆಗಳಿಗೆ ನೇಮಕಾತಿ ನಿರಾಕರಿಸಲಾಗಿತ್ತು. ಆದರೆ ಎದೆಗುಂದದ ಪಾಟೀಲ್ ತನ್ನ ಎರಡನೇ ಪ್ರಯತ್ನದಲ್ಲಿ ಮತ್ತೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದರು.

ಮಹಾರಾಷ್ಟ್ರದ ಉಲ್ಲಾಸನಗರ್ ನಿವಾಸಿಯಾಗಿರುವ ಪ್ರಾಂಜಲ್ ಪಾಟೀಲ್ ಆರು ವರ್ಷದ ಬಾಲಕಿಯಾಗಿರುವಾಗ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದರು. 2016ರಲ್ಲಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಮತ್ತು 773ನೇ ಅಂಕ ಪಡೆದುಕೊಂಡಿದ್ದರು. ನಂತರ ಮುಂದಿನ ವರ್ಷ ಮತ್ತೆ ಪರೀಕ್ಷೆ ಎದುರಿಸಿದ ಅವರು 124ನೇ ಅಂಕ ಪಡೆದುಕೊಂಡಿದ್ದರು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News