8,900 ಕೆ.ಜಿ. ಸ್ಫೋಟಕಗಳ ವಶ: ಇಬ್ಬರ ಬಂಧನ

Update: 2019-10-14 15:02 GMT

ಹೈದರಾಬಾದ್,ಅ.14: ತೆಲಂಗಾಣದ ಹೈದರಾಬಾದ್ ಸಮೀಪದ ಕೀಸರ್‌ನಲ್ಲಿ 8,900 ಕೆ.ಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸ್ಫೋಟಕಗಳ ಜೊತೆಗೆ 376 ಬೂಸ್ಟರ್‌ಗಳು ಮತ್ತು 165 ವಿದ್ಯುತ್ತೇತರ ಡಿಟೊನೆಟರ್‌ಗಳನೂ ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ. ಕೀಸರ್ ಪೊಲೀಸರು ಮತ್ತು ವಿಶೇಷ ಕಾರ್ಯಾಚರಣಾ ತಂಡದ ಅಧಿಕಾರಿಗಳು ಎರಡು ವಾಹನಗಳನ್ನು ತಡೆದು ಸ್ಫೋಟಕಗಳನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ ಎಂದು ರಚಕೊಂಡ ಪೊಲೀಸ್ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಅಕ್ಟೋಬರ್ 12ರಂದು ವಾಹನ ಚಾಲಕ ಟಿ.ವೆಂಕಟೇಶಂ ಬೊಮ್ಮಲರಮರಮ್‌ನಲ್ಲಿ ಸ್ಫೋಟಕಗಳನ್ನು ವಾಹನಕ್ಕೆ ತುಂಬಿಸಿದ ಬಳಿಕ ರಾತ್ರಿ ಏಳು ಗಂಟೆಗೆ ಪ್ರಯಾಣ ಆರಂಭಿಸಿದ್ದ. ಆತ ಕೀಸರ್‌ಗೆ ತಲುಪಿ ಅಲ್ಲಿ ಶ್ರವಣ್ ರೆಡ್ಡಿಯನ್ನು ಭೇಟಿಯಾದ. ಆತನ ಸೂಚನೆಯಂತೆ ವೆಂಕಟೇಶಂ ಕೀಸರ್‌ನ ವನ್ನಿಗುಡಂನಲ್ಲಿರುವ ಹರ್ಷಾ ಸ್ಟೋನ್ ಇಂಡಸ್ಟ್ರಿಯಲ್ಲಿ ಸ್ಫೋಟಕಗಳನ್ನು ಇಳಿಸಿದ್ದ.

ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತಲುಪಿದ ಪೊಲೀಸರು ಸ್ಫೋಟಕಗಳಿದ್ದ ವಾಹನಗಳನ್ನು ಸುತ್ತವರಿದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರ ವಿರುದ್ಧ ಸ್ಫೋಟಕ ಕಾಯ್ದೆಯ 9(ಬಿ)(1)(ಸಿ) ವಿಧಿಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News