ಕೆಜಿ ತರಗತಿಗಳ ಮಕ್ಕಳಿಗೆ ಮೌಖಿಕ, ಲಿಖಿತ ಪರೀಕ್ಷೆಗಳನ್ನು ನಡೆಸಬಾರದು: ಎನ್‌ಸಿಇಆರ್‌ಟಿ

Update: 2019-10-14 16:32 GMT

ಹೊಸದಿಲ್ಲಿ,ಅ.14: ಶಾಲಾಪೂರ್ವ ಅಥವಾ ಕೆಜಿ ತರಗತಿಗಳ ಮಕ್ಕಳಿಗೆ ಲಿಖಿತ ಅಥವಾ ಮೌಖಿಕ ಪರೀಕ್ಷೆಗಳನ್ನು ನಡೆಸಕೂಡದು ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ)ಯು ಸ್ಪಷ್ಟಪಡಿಸಿದೆ. ಪೋಷಕರ ಮಹತ್ವಾಕಾಂಕ್ಷೆಯಿಂದ ಹುಟ್ಟಿಕೊಳ್ಳುವ ಇಂತಹ ಪದ್ಧತಿಯು ಹಾನಿಕಾರಕ ಮತ್ತು ಅನಪೇಕ್ಷಣಿಯವಾಗಿದೆ ಎಂದು ಅದು ಬಣ್ಣಿಸಿದೆ.

ಯಾವುದೇ ಕಾರಣಕ್ಕೂ ಮಕ್ಕಳು ಯಾವದೇ ರೀತಿಯ ಮೌಖಿಕ ಹಾಗೂ ಲಿಖಿತ ಪರೀಕ್ಷೆಗೆ ಹಾಜರಾಗುವಂತೆ ಮಾಡುವಂತಿಲ್ಲ ಎಂದು ಹೇಳಿರುವ ಎನ್‌ಸಿಇಆರ್‌ಟಿ ಮಾರ್ಗಸೂಚಿಯು,ಶಾಲಾಪೂರ್ವ ಹಂತದಲ್ಲಿ ಮೌಲ್ಯಮಾಪನದ ಉದ್ದೇಶವು ಮಕ್ಕಳಿಗೆ ‘ಪಾಸ್’ ಅಥವಾ ‘ಫೇಲ್ ’ ಹಣೆಪಟ್ಟಿಯನ್ನು ಅಂಟಿಸುವುದಲ್ಲ ಎಂದು ಹೇಳಿದೆ.

ಮಕ್ಕಳ ಚಟುವಟಿಕೆಗಳು,ಆರೋಗ್ಯ ಸ್ಥಿತಿ,ದೈಹಿಕ ಮತ್ತು ಸಾಮಾಜಿಕ ಯೋಗಕ್ಷೇಮ ಇತ್ಯಾದಿ ವಿಷಯಗಳಲ್ಲಿ ವೌಲ್ಯಮಾಪನ ನಡೆಸಬೇಕು ಮತ್ತು ವ್ಯವಸ್ಥಿತ ಅಭಿಪ್ರಾಯಗಳಿಗೆ ಬರಬೇಕು ಎಂದು ಅದು ಹೇಳಿದೆ.

ಪ್ರಸಕ್ತ ದೇಶದಲ್ಲಿ ಮಕ್ಕಳನ್ನು ಜಡ ಮತ್ತು ಏಕತಾನತೆಯ ದಿನಚರಿಗೆ ತಳ್ಳುವುದರಿಂದ ಹಿಡಿದು ಮಕ್ಕಳನ್ನು,ಹೆಚ್ಚಾಗಿ ಇಂಗ್ಲಿಷ್‌ನಲ್ಲಿ ವ್ಯವಸ್ಥಿತ ಔಪಚಾರಿಕ ಕಲಿಕೆಗೆ ಒಡ್ಡುವ,ಪರೀಕ್ಷೆಗಳು ಮತ್ತು ಹೋಮ್‌ವರ್ಕ್‌ಗಳಿಗೆ ಅವರನ್ನು ಗುರಿಯಾಗಿಸುವ ಹಾಗೂ ಆಟವಾಡುವ ಅವರ ಹಕ್ಕುಗಳನ್ನು ನಿರಾಕರಿಸುವವರೆಗಿನ ಶಾಲಾಪೂರ್ವ ಶಿಕ್ಷಣ ಕಾರ್ಯಕ್ರಮಗಳಿವೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಅಧಿಕಾರಿಯೋರ್ವರು ತಿಳಿಸಿದರು.

ಮಗುವಿನ ಪ್ರಗತಿಯನ್ನು ಅದರ ವರ್ತನೆ,ರಚನಾತ್ಮಕತೆ,ಇತರ ಮಕ್ಕಳೊಡನೆ ಸಂವಾದ ಇತ್ಯಾದಿಗಳನ್ನು ಗಮನಿಸುವ ಮೂಲಕ ದಾಖಲಿಸಬೇಕು. ವೌಲ್ಯಮಾಪನವು ಮಕ್ಕಳು ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ತಮಗೆ ಆಸಕ್ತಿಯ ವಿಷಯಗಳಲ್ಲಿ ಗಮನ ಕೇಂದ್ರೀಕರಿಸಲು ನೆರವಾಗುವಂತಿರಬೇಕು ಎಂದೂ ಎನ್‌ಸಿಇಆರ್‌ಟ್ ಮಾರ್ಗಸೂಚಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News