ಒಳನುಸುಳುವಿಕೆ: ಗಡಿ ನಿಯಂತ್ರಣ ರೇಖೆಯಲ್ಲಿ ಹೆಚ್ಚುವರಿ ಯೋಧರ ನಿಯೋಜನೆ

Update: 2019-10-14 16:47 GMT

ಹೊಸದಿಲ್ಲಿ, ಅ. 14: ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ಕೇಂದ್ರ ಸರಕಾರ ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಒಳನುಸುಳುವ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ನಿಗ್ರಹಿಸಲು ಸೇನಾ ಪಡೆ ಕಳೆದ ಎರಡು ತಿಂಗಳಿಂದ ಗಡಿ ನಿಯಂತ್ರಣ ರೇಖೆಯಲ್ಲಿ ಇನ್ನಷ್ಟು ಯೋಧರನ್ನು ನಿಯೋಜಿಸುತ್ತಿದೆ ಎಂದು ಉತ್ತರ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಹೇಳಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ಗಡಿ ನಿಯಂತ್ರಣ ರೇಖೆಯಲ್ಲಿ ಸರಿಸುಮಾರು ಪ್ರತಿ ದಿನ ಉಗ್ರರು ಒಳನುಸುಳುವಿಕೆ ಹಾಗೂ ಪಾಕಿಸ್ತಾನ ಸೇನೆಯಿಂದ ಕದನ ವಿರಾಮ ಉಲ್ಲಂಘನೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುವಿಕೆ ನಿಗ್ರಹಿಸಲು ನಮ್ಮ ಸಾಮರ್ಥ್ಯ ಹೆಚ್ಚಿಸಲು ಉತ್ತರ ಕಮಾಂಡ್‌ನ ಹೊರಗಿನಿಂದ ಹೆಚ್ಚುವರಿ ಯೋಧರನ್ನು ಕರೆಸಿದ್ದೇವೆ. ಉಗ್ರಗಾಮಿ ಚಟುವಟಿಕೆ ನಿಷ್ಕ್ರಿಯೆಗೊಂಡ ಪ್ರದೇಶಗಳ ಸೇನೆಯನ್ನು ಮುಂಚೂಣಿ ಪ್ರದೇಶಗಳಿಗೆ ರವಾನಿಸಲಾಗಿದೆ. ನಾವು ಒಳನುಸುಳುವಿಕೆಯ ಹಲವು ಪ್ರಯತ್ನಗಳನ್ನು ನಿಗ್ರಹಿಸಿದ್ದೇವೆ ಎಂದು ಜನರಲ್ ಸಿಂಗ್ ತಿಳಿಸಿದ್ದಾರೆ.

 ಆದರೆ, ಸೇನೆಯ ಮರು ನಿಯೋಜನೆ ವಿವರಗಳನ್ನು ಅವರು ಬಹಿರಂಗಬಡಿಸಿಲ್ಲ. ಗಡಿ ನಿಯಂತ್ರಣ ರೇಖೆಯಲ್ಲಿ ಪಡೆಗಳ ಸಂಖ್ಯೆ ಏರಿಕೆಯಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ತಿಳಿದಿರುವ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಪಾಕಿಸ್ತಾನದಿಂದ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯ ಸಂಖ್ಯೆ ಹೆಚ್ಚಾಗಿದೆ. ಅಧಿಕೃತ ದತ್ತಾಂಶದ ಪ್ರಕಾರ ಕಳೆದ ವರ್ಷ 1,629 ಹಾಗೂ 2017ರಲ್ಲಿ 680ಕ್ಕೆ ಹೋಲಿಸಿದರೆ, ಈ ವರ್ಷ ಅಕ್ಟೋಬರ್ 10ರ ವರೆಗೆ 2,317 ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಸಿಂಗ್ ಹೇಳಿದ್ದಾರೆ. ಭಯೋತ್ಪಾದಕ ದಾಳಿ ನಡೆಸಲು ಜಮ್ಮು ಕಾಶ್ಮೀರದ ಒಳಗೆ ಉಗ್ರರು ನುಸುಳಲು ನೆರವಾಗುವಂತೆ ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ರಣಬೀರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News