ಪಾಕಿಸ್ತಾನವು ಭಯೋತ್ಪಾದನೆಯನ್ನು ಅಸ್ತ್ರವನ್ನಾಗಿ ಬಳಸುತ್ತಿದೆ: ದೋವಲ್

Update: 2019-10-14 16:51 GMT

ಹೊಸದಿಲ್ಲಿ,ಅ.14: ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯವನ್ನು ಒದಗಿಸುತ್ತಿದೆ ಎಂದು ಸೋಮವಾರ ಇಲ್ಲಿ ಆರೋಪಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು,ಅದು ಜಾಗತಿಕ ಹಣಕಾಸು ಕ್ರಿಯಾ ಕಾರ್ಯಪಡೆ(ಎಫ್‌ಎಟಿಎಫ್)ಯಿಂದ ಒತ್ತಡವನ್ನು ಎದುರಿಸುತ್ತಿದೆ ಎಂದರು.

ಭಯೋತ್ಪಾದನೆಗೆ ಹಣಕಾಸು ನೆರವನ್ನು ನಿಯಂತ್ರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳದ ರಾಷ್ಟ್ರಗಳ ಶಂಕಾಸ್ಪದ ಪಟ್ಟಿ (ಗ್ರೇ ಲಿಸ್ಟ್)ಯಲ್ಲಿ ಪಾಕಿಸ್ತಾನವನ್ನು ಮುಂದುವರಿಸುವ ಬಗ್ಗೆ ನಿರ್ಧರಿಸಲು ಜಾಗತಿಕ ಭಯೋತ್ಪಾದನೆ ಕಣ್ಗಾವಲು ಸಂಸ್ಥೆಯಾಗಿರುವ ಎಫ್‌ಎಟಿಎಫ್ ಪ್ಯಾರಿಸ್‌ನಲ್ಲಿ ಸಭೆ ಸೇರಿರುವ ಸಂದರ್ಭದಲ್ಲೇ ದೋವಲ್‌ರ ಈ ಹೇಳಿಕೆ ಹೊರಬಿದ್ದಿದೆ.

 ಭಯೋತ್ಪಾದನೆ ನಿಗ್ರಹ ಘಟಕ (ಎಟಿಎಸ್)ಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡುತ್ತಿದ್ದ ದೋವಲ್,ಪಾಕಿಸ್ತಾನವು ಎಫ್‌ಎಟಿಎಫ್‌ನಿಂದ ಅತ್ಯಂತ ಹೆಚ್ಚಿನ ಒತ್ತಡವನ್ನು ಎದುರಿಸುತ್ತಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ಸರಕಾರಿ ನೀತಿಯ ಅಸ್ತ್ರವನ್ನಾಗಿ ಬಳಸುತ್ತಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎನ್ನುವುದು ನಮಗೆಲ್ಲರಿಗೂ ಗೊತ್ತು. ಆದರೆ ಅಂತರರಾಷ್ಟ್ರೀಯ ಪರಿಶೀಲನೆಯನ್ನು ತಾಳಿಕೊಳ್ಳುವ ದೃಢವಾದ ಸಾಕ್ಷ್ಯಾಧಾರಗಳು ನಮಗೆ ಅಗತ್ಯವಾಗಿದೆ ಎಂದರು.

ಜೂನ್,2018ರಲ್ಲಿ ಪಾಕಿಸ್ತಾನವನ್ನು ಶಂಕಾಸ್ಪದ ಪಟ್ಟಿಗೆ ಸೇರಿಸಿದ್ದ ಎಫ್‌ಎಟಿಎಫ್,ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು 27 ಅಂಶಗಳ ಕ್ರಿಯಾ ಯೋಜನೆಯೊಂದನ್ನು ಅನುಷ್ಠಾನಿಸುವಂತೆ ಅದಕ್ಕೆ ಸೂಚಿಸಿ, 2019,ಅಕ್ಟೋಬರ್‌ವರೆಗೆ ಗಡುವು ನೀಡಿತ್ತು. ಆದರೆ ಇದನ್ನು ಸಂಪೂರ್ಣವಾಗಿ ಪಾಲಿಸುವಲ್ಲಿ ಪಾಕಿಸ್ತಾನವು ವಿಫಲಗೊಂಡಿದೆ.

 ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ವಿದೇಶಿ ಏಜೆನ್ಸಿಗಳ ಮೇಲೆ ಒತ್ತಡವನ್ನು ಹೇರುತ್ತಿರುವುದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯನ್ನೂ ಪ್ರಶಂಸಿಸಿದ ದೋವಲ್, ಭಯೋತ್ಪಾದಕರ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳುವ, ಅವರಿಗೆ ಹಣಕಾಸು ನೆರವನ್ನು ತಡೆಯುವ ಮತ್ತು ಅವರ ಸಾಮರ್ಥ್ಯಗಳನ್ನು ಕುಂಠಿತಗೊಳಿಸುವ ಮೂಲಕ ನಾವು ಭೀತಿವಾದದ ವಿರುದ್ಧ ಹೋರಾಡುತ್ತಿದ್ದೇವೆ. ಮಾಹಿತಿ ನಿರ್ವಹಣೆಯೂ ಮುಖ್ಯವಾಗಿದೆ. ನಾವೇನು ಮಾಡುತ್ತಿದ್ದೇವೆ ಎನ್ನುವುದನ್ನು ನಾವು ಮಾಧ್ಯಮಗಳಿಗೆ ತಿಳಿಸಬೇಕು,ಇಲ್ಲದಿದ್ದರೆ ಅವು ಊಹಾಪೋಹಗಳನ್ನು ವರದಿ ಮಾಡುತ್ತವೆ ಎಂದರು.

 ಎಟಿಎಸ್ ಗಳನ್ನು ‘ಭೀತಿವಾದದ ವಿರುದ್ಧ ಯೋಧರು’ಎಂದು ಬಣ್ಣಿಸಿದ ಅವರು,ನಿಮ್ಮ ಕೆಲಸವು ಕೇವಲ ತನಿಖೆಗೆ ಸೀಮಿತವಾಗಿಲ್ಲ. ನೀವು ಭೀತಿವಾದದ ವಿರುದ್ಧ ಸಂಪೂರ್ಣ ಹೋರಾಟಗಾರರಾಗಿದ್ದೀರಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News