ಕೋಸ್ಟ್‌ಗಾರ್ಡ್‌ನ ನೂತನ ಹಡಗು ‘ವರಹ’ ಮಂಗಳೂರಿಗೆ

Update: 2019-10-15 10:24 GMT

ಮಂಗಳೂರು, ಅ.15: ಕರಾವಳಿಯ ಸಮುದ್ರದಲ್ಲಿ ಕಣ್ಗಾವಲು, ಗಸ್ತು ಕಾರ್ಯ ನಿರ್ವಹಿಸಲು ಪಣಂಬೂರು ಕೋಸ್ಟ್‌ಗಾರ್ಡ್ ಕೇಂದ್ರಕ್ಕೆ ಅತ್ಯಾಧುನಿಕ ಹಡಗು ವರಹ ಸೇರ್ಪಡೆಗೊಂಡಿದ್ದು, ಇಂದು ಮಂಗಳೂರು ಕಡಲ ತೀರಕ್ಕೆ ಆಗಮಿಸಿತು.

ಗರಿಷ್ಠ 26 ನಾಟಿಕಲ್ ವೇಗದಲ್ಲಿ ಚಲಿಸಬಲ್ಲ ಎರಡು 9100 ಕಿಲೋವ್ಯಾಟ್ ಡೀಸೆಲ್ ಇಂಜಿನ್‌ಗಳನ್ನು ಹೊಂದಿರುವ ಈ ಹಡಗು 2100 ಟನ್ ಭಾರದಿಂದ ಕೂಡಿದೆ. ಒಮ್ಮೆ ಈ ಹಡಗು ಪ್ರಯಾಣ ಆರಂಭಿಸಿದರೆ ಸಮುದ್ರದ ನೀರಿನಲ್ಲಿ 20 ದಿನಗಳ ಕಾಲ ಸುಮಾರು 5000 ನಾಟಿಕಲ್ ಮೈಲುಗಳನ್ನು ಸಂಚರಿಸಬಲ್ಲದು. ಕ್ಯಾಪ್ಟನ್ ದುಷ್ಯಂತ್ ಕುಮಾರ್ ನೇತೃತ್ವದಲ್ಲಿ ಇಂದು ಎನ್‌ಎಂಪಿಟಿಯ (ನವ ಮಂಗಳೂರು ಬಂದರು ಮಂಡಳಿ)ಯ ಕಡಲ ತೀರಕ್ಕೆ ಆಗಮಿಸಿದ ‘ವರಹ’ವನ್ನು ಕೋಸ್ಟ್‌ಗಾರ್ಡ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಬ್ಯಾಂಡ್ ವಾದ್ಯಗಳೊಂದಿಗೆ ಸ್ವಾಗತಿಸಿದರು.

14 ಅಧಿಕಾರಿಗಳು ಹಾಗೂ 89 ಸಿಬ್ಬಂದಿಯಿಂದ ಕೂಡಿದ ಈ ಹಡಗು ಸಮುದ್ರ ಮಾರ್ಗದಲ್ಲಿ ಕಳ್ಳಸಾಗಾಣಿಕೆ, ತೈಲ ಸೋರಿಕೆ, ತಪಾಸಣೆ, ಭದ್ರತೆಯ ಕಣ್ಗಾವಲು ಇರಿಸಲಿದೆ. ತುರ್ತು ಸಂದರ್ಭ ಎರಡು ಎಂಜಿನಿಗಳ ಹೆಲಿಕಾಪ್ಟರ್ ಹೊತ್ತೊಯ್ಯುವ ಸಾಮರ್ಥ್ಯವನ್ನು ಈ ಹಡಗು ಹೊಂದಿದೆ.

30 ಎಂ.ಎಂ.ಗನ್, 12.7 ಎಂ.ಎಂ ಗನ್, ಅತ್ಯಾಧುನಿಕ ರಾಡಾರ್, ಸೆನ್ಸಾರ್, ಹೈಸ್ಪೀಡ್ ಬೋಟ್‌ಗಳನ್ನು ಇದು ಒಳಗೊಂಡಿದೆ. ನವ ಮಂಗಳೂರು ಬಂದರನ್ನು ಕೇಂದ್ರವಾಗಿಸಿಕೊಂಡು ಕಾರ್ಯಾಚರಿಸಲಿರುವ ವರಹ ಹಡಗು, ವಿಶಾಲವಾದ ಪಶ್ಚಿಮ ಕರಾವಳಿಯ ರಕ್ಷಣೆಯ ಜತೆಗೆ ಕಡಲ ತೀರದ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪಗಳ ರಕ್ಷಣಾ ಕಾರ್ಯದಲ್ಲಿಯೂ ತನ್ನನ್ನು ತೊಡಗಿಸಿಕೊಳ್ಳಲಿದೆ ಎಂದು ಕೋಸ್ಟ್‌ಗಾರ್ಡ್‌ನ ಕಮಾಂಡರ್, ಡಿಐಜಿ ಎಸ್‌ಎಸ್ ದಾಸಿಲ ತಿಳಿಸಿದರು.

ಕೋಸ್ಟ್‌ಗಾರ್ಡ್‌ಗೆ ವರಹದ ಸೇರ್ಪಡೆ ಕರಾವಳಿಯ ರಕ್ಷಣೆಯಲ್ಲಿ ಬಲವರ್ದನೆಗೊಂಂತಾಗಿದೆ ಎಂದು ಅವರು ಹೇಳಿದರು.

ಸೆಪ್ಟಂಬರ್ 17ರಂದು ಕೋಸ್ಟ್‌ಗಾರ್ಡ್‌ಗೆ ನಿಯೋಜಿಸಲಾದ ಈ ಹಡಗು ಸೆ.25ರಂದು ನೀರಿಗಿಳಿದಿತ್ತು. ಚೆನ್ನೆಯಿಂದ ಅ. 4ರಂದು ಪ್ರಯಾಣ ಆರಂಭಿಸಿ 7ರಂದು ಕೊಚ್ಚಿಗೆ ತಲುಪಿ ಅಲ್ಲಿಂದ ನಾಲ್ಕು ದಿನಗಳ ಕಾಲ ಗಸ್ತಿನ ಬಳಿಕ ಇಂದು ಮಂಗಳೂರಿಗೆ ಆಗಮಿಸಿದೆ ಎಂದು ಹಡಗಿನ ಡೆಪ್ಯುಟಿ ಕಮಾಂಡೆಂಟ್ ಸತೀಶ್ ಕುಮಾರ್ ತಿಳಿಸಿದರು.

ನೂತನ ಹಡಗು ವರಹ ಸ್ವಾಗತದ ಸಂದರ್ಭ ಕೋಸ್ಟ್‌ಗಾರ್ಡ್‌ನ ಹಿರಿಯ ಅಧಿಕಾರಿಗಳಾದ ರಾಜ್ ಕಮಲ್ ಸಿನ್ಹಾ, ಲಕ್ಷೀಕಾಂತ್ ಗಜಿಭಿಯೆ, ಸಿಐಎಸ್‌ಎಫ್‌ನ ಅಧಿಕಾರಿ ಅಶುತೋಷ್ ಗೌರ್ ಉಪಸ್ಥಿತರಿದ್ದರು.

ವರಹ ವಿಶೇಷತೆಗಳು

ಬಹುತೇಕವಾಗಿ ಕೋಸ್ಟ್‌ಗಾರ್ಡ್‌ನ ಹಡಗುಗಳು ಸಾಮಾನ್ಯ ಕಾಗದದ ಚಾರ್ಟ್ ಹೊಂದಿರುತ್ತಿದ್ದವು. ಇದೀಗ ಇಲೆಕ್ಟ್ರಾನಿಕ್ ಚಾರ್ಟ್ ಡಿಸ್‌ಪ್ಲೇ ವ್ಯವಸ್ಥೆಯೊಂದಿಗೆ ಕಾರಿನಂತಹ ವೀಲಿಂಗ್ ವ್ಯವಸ್ಥೆಯನ್ನು ವರಹ ಹೊಂದಿದೆ.

ಹಡಗಿನ ಎರಡೂ ಬದಿಗಳಿಂದಲೂ ಕಂಟ್ರೋಲ್ ವ್ಯವಸ್ಥೆಯನ್ನು ಮಾಡಬಹುದಾಗಿದೆ.

ಸಮುದ್ರದಲ್ಲಿರುವ ಹಡಗಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದಲ್ಲಿ ತುರ್ತು ಕಾರ್ಯಾಚರೆಗೆ ಬಾಹ್ಯ ಅಗ್ನಿ ಶಾಮಕ ವ್ಯವಸ್ಥೆ. 20 ದಿನಗಳ ಕಾಲ ಈ ಹಡಗು ಸಮುದ್ರದಲ್ಲಿ ನಿರಂತರವಾಗಿ ಸಂಚರಿಸಬಲ್ಲದು. ಅಷ್ಟು ದಿನಗಳ ಅಗತ್ಯವಾದ ಇಂಧನ ಹಾಗೂ ಆಹಾರ ಸಾಮಗ್ರಿಗಳನ್ನು ಈ ಹಡಗು ಹೊಂದಿರಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News