ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಮೂಲಕ ಮುಂದಿನ ಯುದ್ಧ ಗೆಲ್ಲುತ್ತೇವೆ: ಜ.ರಾವತ್

Update: 2019-10-15 14:21 GMT

ಹೊಸದಿಲ್ಲಿ,ಅ.15: ದೇಶದ ರಕ್ಷಣಾ ಪಡೆಗಳ ಅಗತ್ಯಗಳಿಗೆ ದೇಶಿಯ ನಿರ್ಮಿತ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ದಾಪುಗಾಲಿಡುತ್ತಿದೆ ಮತ್ತು ಮುಂದಿನ ಯುದ್ಧವನ್ನು ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರ ವ್ಯವಸ್ಥೆಗಳು ಹಾಗೂ ಉಪಕರಣಗಳ ಮೂಲಕ ಗೆಲ್ಲುತ್ತೇವೆ ಎಂದು ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರು ಮಂಗಳವಾರ ಇಲ್ಲಿ ಹೇಳಿದರು.

41ನೇ ಡಿಆರ್‌ಡಿಒ ನಿರ್ದೇಶಕರ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು,ಭಾರತದ ರಕ್ಷಣಾ ಉದ್ಯಮವು ಈಗಷ್ಟೇ ತಲೆಯೆತ್ತುತ್ತಿದ್ದು ಭವಿಷ್ಯದ ಯುದ್ಧಕ್ಕಾಗಿ ಅಗತ್ಯ ಶಸ್ತ್ರಾಸ್ತ್ರ ವ್ಯವಸ್ಥೆಗಳ ಅಭಿವೃದ್ಧಿಯತ್ತ ಗಮನ ಹರಿಸಲು ಮತ್ತು ‘ಸಂಪರ್ಕ ರಹಿತ ಯುದ್ಧ ’ಕ್ಕಾಗಿ ಸಜ್ಜಾಗಲು ಇದು ಸಕಾಲವಾಗಿದೆ. ಭವಿಷ್ಯದ ಯುದ್ಧದಲ್ಲಿ ಬಳಸಿಕೊಳ್ಳಲು ಕೃತಕ ಬುದ್ಧಿಮತ್ತೆ ಯೊಂದಿಗೆ ಸೈಬರ್,ಬಾಹ್ಯಾಕಾಶ,ಲೇಸರ್,ಇಲೆಕ್ಟ್ರಾನಿಕ್ ಮತ್ತು ರೊಬಾಟಿಕ್ ತಂತ್ರಜ್ಞಾನಗಳನ್ನು ಅಭಿವೃದ್ಧಿಗೊಳಿಸಲು ನಾವು ಗಮನ ಹರಿಸಬೇಕಿದೆ ಎಂದರು.

ಡಿಆರ್‌ಡಿಒ ಮತ್ತು ಸೇನೆಯ ಅಧಿಕಾರಿಗಳು ಜಂಟಿ ಸಂಶೋಧನೆಗಳಿಗೆ ಕರೆ ನೀಡಿದ ಅವರು,ಜಂಟಿ ಯೋಜನೆಯಲ್ಲಿ ಯಶಸ್ಸು ಮತ್ತು ಸೋಲು ಜಂಟಿ ಹೊಣೆಗಾರಿಕೆಯಾಗಿರುತ್ತವೆ ಮತ್ತು ಪರಸ್ಪರರತ್ತ ಬೆರಳು ತೋರಿಸುವ ಪ್ರಮೇಯವಿರುವುದಿಲ್ಲ ಎಂದು ಅವರು ಹೇಳಿದರು.

ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆ ಸಂದರ್ಭ ಅವರನ್ನು ನೆನಪಿಸಿಕೊಂಡ ಜ.ರಾವತ್, ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಮುದಾಯಕ್ಕೆ ಮಾನದಂಡಗಳನ್ನು ನಿಗದಿಗೊಳಿಸಿದ್ದರು ಮತ್ತು ಇವು ಉದಯೋನ್ಮುಖ ವಿಜ್ಞಾನಿಗಳಿಗೆ ಸವಾಲಾಗಿವೆ. ವಿಜ್ಞಾನಿಗಳು ಈ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಾರೆ ಎಂದು ತನಗೆ ವಿಶ್ವಾಸವಿದೆ ಎಂದೂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News