ಮೂವರು ಮಾನವ ಹಕ್ಕು ಹೋರಾಟಗಾರರ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ತಿರಸ್ಕೃತ

Update: 2019-10-15 14:28 GMT

ಹೊಸದಿಲ್ಲಿ,ಅ.15: ಭೀಮಾ- ಕೋರೆಗಾಂವ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಮಾನವ ಹಕ್ಕು ಹೋರಾಟಗಾರರಾದ ಸುಧಾ ಭಾರದ್ವಾಜ್,ವರ್ನನ್ ಗೊನ್ಸಾಲ್ವಿಸ್ ಮತ್ತು ಅರುಣ್ ಫೆರೇರಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಬಾಂಬೆ ಉಚ್ಚ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆ.

2018,ಜ.1ರಂದು ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈ ಮೂವರನ್ನು 2018,ಆ.28ರಂದು ಬಂಧಿಸಲಾಗಿತ್ತು. ಅವರು ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದು,ಅಕ್ರಮ ಚಟುವಟಿಕೆಗಳ (ತಡೆ)ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಹೋರಾಟಗಾರರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಅವರ ಬಂಧನ ಮತ್ತು ಪ್ರಕರಣದಲ್ಲಿ ಇತರರನ್ನು ಹೆಸರಿಸಿರುವುದು ತನ್ನ ವಿರುದ್ಧ ಧ್ವನಿಯೆತ್ತುವವರನ್ನು ದಮನಿಸುವ ಸರಕಾರದ ಕಾರ್ಯತಂತ್ರದ ಭಾಗವಾಗಿದೆ ಎದು ಹಲವಾರು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆ.26ರಂದು ಜಾಮೀನು ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದ್ದ ನ್ಯಾ.ಎಸ್.ವಿ.ಕೊತ್ವಾಲ್ ಅವರು ಅ.7ರಂದು ತನ್ನ ತೀರ್ಪನ್ನು ಕಾಯ್ದಿರಿಸಿದ್ದರು.

ಪುಣೆ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ತನ್ನ ಕಕ್ಷಿದಾರರ ಹೆಸರು ಇರಲಿಲ್ಲ,ಆದರೂ ಅವರು ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ ಎಂದು ಗೊನ್ಸಾಲ್ವಿಸ್ ಪರ ವಕೀಲ ಮಿಹಿರ ದೇಸಾಯಿ ವಾದಿಸಿದ್ದರೆ,ಪೊಲೀಸರು ಒದಗಿಸಿರುವ ಸಾಕ್ಷ್ಯಾಧಾರಗಳು ನ್ಯಾಯಾಲಯದಲ್ಲಿ ಅಂಗೀಕಾರಾರ್ಹವಲ್ಲ ಎಂದು ವಾದಿಸಿದ್ದ ಭಾರದ್ವಾಜ್ ಪರ ವಕೀಲ ಯುಗ್ ಚೌಧುರಿ ಅವರು,ಪೊಲೀಸರು ಉಲ್ಲೇಖಿಸಿರುವ ದಾಖಲೆಗಳು ಅವರು ಹೇಳುವಂತೆ ಭಾರದ್ವಾಜರ ಕಂಪ್ಯೂಟರ್‌ನಲ್ಲಿ ಇರಲಿಲ್ಲ ಎಂದು ಆರೋಪಿಸಿದ್ದರು.

ತನ್ನ ಕಕ್ಷಿದಾರರು ಆದಿವಾಸಿಗಳ ಪರ ಹೋರಾಟಗಾರರಾಗಿದ್ದಾರೆ ಎಂದು ಫೆರೇರಾ ಪರ ವಕೀಲ ಸುಭಾಷ ಪಸ್ಚೋಲಾ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಹಿಂದೆಯೂ ಅಕ್ರಮ ಚಟುವಟಿಕೆಗಳ (ತಡೆ)ಕಾಯ್ದೆಯಡಿ ಬಂಧಿತರಾಗಿ ಐದು ವರ್ಷ ಜೈಲಿನಲ್ಲಿ ಕಳೆದಿದ್ದ ಫೆರೇರಾ ತನ್ನ ವಿರುದ್ಧದ ಎಲ್ಲ ಪ್ರಕರಣಗಳಿಂದ ಖುಲಾಸೆಗೊಂಡಿದ್ದರು.

ಜಾಮೀನು ಅರ್ಜಿಗಳನ್ನು ವಿರೋಧಿಸಿದ್ದ ಎಪಿಪಿ ಅರುಣಾ ಪೈ ಅವರು,ಆರೋಪಿಗಳು ನಿಷೇಧಿತ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ವಾದಿಸಿದ್ದರು.

ಪ್ರಕರಣದ ಇನ್ನೋರ್ವ ಆರೋಪಿಯಾಗಿರುವ ಗೌತಮ ನವ್ಲಾಖಾರ ಬಂಧನದ ವಿರುದ್ಧ ಅ.15ರವರೆಗೆ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ರಕ್ಷಣೆಯನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News