ನಿಯಮ ಮುರಿದು ಕೆನಡ, ಬ್ರಿಟನ್ ಲೇಖಕಿಯರಿಗೆ ‘ಬೂಕರ್’ ಪ್ರಶಸ್ತಿ

Update: 2019-10-15 15:53 GMT

ಲಂಡನ್, ಅ. 15: ಕೆನಡದ ಮಾರ್ಗರೆಟ್ ಆ್ಯಟ್ವುಡ್ ಮತ್ತು ಬ್ರಿಟನ್‌ನ ಬೆರ್ನಾರ್ಡೈನ್ ಎವರಿಸ್ಟೊ 2019ರ ಬೂಕರ್ ಪ್ರಶಸ್ತಿಯನ್ನು ಸೋಮವಾರ ಜಂಟಿಯಾಗಿ ಗೆದ್ದಿದ್ದಾರೆ. ಈ ಇಬ್ಬರು ಸರಿಸಮಾನರಾಗಿದ್ದಾರೆ ಎಂದು ನಿರ್ಧರಿಸುವ ಮೂಲಕ ತೀರ್ಪುಗಾರರು ಬೂಕರ್ ಪ್ರಶಸ್ತಿಯ ನಿಯಮವೊಂದನ್ನು ಉಲ್ಲಂಘಿಸಿದ್ದಾರೆ.

ಪ್ರಶಸ್ತಿಯನ್ನು ವಿಭಜಿಸಬಾರದು ಎಂದು ಬೂಕರ್ ನಿಯಮಗಳು ಹೇಳುತ್ತವೆ. ಆದರೆ, ಆ್ಯಟ್ವುಡ್‌ರ ‘ದ ಟೆಸ್ಟಾಮೆಂಟ್’ ಮತ್ತು ಎವರಿಸ್ಟೊರ ‘ಗರ್ಲ್, ವುಮನ್, ಅದರ್’ ಪುಸ್ತಕಗಳ ಪೈಕಿ ಒಂದನ್ನು ಆರಿಸಲು ತಮಗೆ ಸಾಧ್ಯವಾಗುವುದಿಲ್ಲ ಎಂದು ತೀರ್ಪುಗಾರರು ಹೇಳಿದರು.

1969ರಲ್ಲಿ ಸ್ಥಾಪನೆಯಾದ ಬಳಿಕ, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊದಲ ಕರಿಯ ಮಹಿಳೆ ಎವರಿಸ್ಟೊ ಆಗಿದ್ದಾರೆ.

‘‘ನಾನು ಅತಿ ಹಿರಿಯಳಾಗಿದ್ದೇನೆ. ನನ್ನ ಮೇಲೆ ಇಷ್ಟೊಂದು ಗಮನ ನೀಡುವುದು ನನಗೆ ಬೇಕಾಗಿಲ್ಲ ಎನ್ನುವುದು ನನ್ನ ಅನಿಸಿಕೆ. ಹಾಗಾಗಿ, ಕಿರಿಯ ಮಹಿಳೆಯೊಬ್ಬರೊಂದಿಗೆ ಈ ಪ್ರಶಸ್ತಿಯನ್ನು ಹಂಚಿಕೊಂಡಿರುವುದಕ್ಕೆ ಸಂತೋಷವಾಗಿದೆ’’ ಎಂದು 79 ವರ್ಷದ ಕೆನಡ ಮಹಿಳೆ ಆ್ಯಟ್ವುಡ್ ಹೇಳಿದರು.

‘‘ನಮ್ಮ ಬಗ್ಗೆ ಸ್ವತಃ ನಾವು ಸಾಹಿತ್ಯ ಬರೆಯದಿದ್ದರೆ ಬೇರೆ ಯಾರೂ ಬರೆಯುವುದಿಲ್ಲ ಎನ್ನುವುದು ನಾವು ಕರಿಯ ಬ್ರಿಟಿಶ್ ಮಹಿಳೆಯರಿಗೆ ಗೊತ್ತು’’ ಎಂದು ಎವರಿಸ್ಟೊ ನುಡಿದರು.

ನಿರ್ಧಾರಕ್ಕೆ ಬರಲಾಗದ ತೀರ್ಪುಗಾರರು

1992ರಲ್ಲೂ ಬೂಕರ್ ಪ್ರಶಸ್ತಿಯನ್ನು ವಿಭಜಿಸಲಾಗಿತ್ತು. ಆದರೆ, ಆ ಬಳಿಕ ನಿಯಮವನ್ನು ಬದಲಾಯಿಸಿ, ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡುವುದಾಗಿ ನಿರ್ಧರಿಸಲಾಗಿತ್ತು.

ಇಬ್ಬರು ಪ್ರಶಸ್ತಿ ವಿಜೇತರನ್ನು ಆರಿಸಲು ಸಾಧ್ಯವಿಲ್ಲ ಎಂಬುದಾಗಿ ಪ್ರಶಸ್ತಿಯ ಸಂಘಟಕರು ಈ ಬಾರಿಯ ತೀರ್ಪುಗಾರರಿಗೆ ಸ್ಪಷ್ಟಪಡಿಸಿದರು. ಆದರೆ, ‘‘ನಿಯಮಗಳನ್ನು ಉಲ್ಲಂಘಿಸುವುದು ನಮ್ಮ ನಿರ್ಧಾರವಾಗಿದೆ’’ ಎಂದು ಐದು ಗಂಟೆಗಳ ಸಮಾಲೋಚನೆಯ ಬಳಿಕ ಐವರು ಸದಸ್ಯರ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಪೀಟರ್ ಫ್ಲಾರೆನ್ಸ್ ಹೇಳಿದರು.

ಇಬ್ಬರು ಲೇಖಕರು 50,000 ಪೌಂಡ್ (ಸುಮಾರು 45.60 ಲಕ್ಷ ರೂಪಾಯಿ) ನಗದು ಬಹುಮಾನವನ್ನು ಹಂಚಿಕೊಳ್ಳುವುದೇ ಸೂಕ್ತ ಎಂಬ ನಿರ್ಧಾರಕ್ಕೆ ನಾವು ಬಂದಿದ್ದೇವೆ ಎಂದು ತೀರ್ಪುಗಾರರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News