ಸರಕಾರದ ಪ್ರಶಸ್ತಿ ವಿಜೇತ ಕಾಶ್ಮೀರಿ ಪತ್ರಕರ್ತನ ವಿದೇಶ ಪ್ರಯಾಣಕ್ಕೆ ತಡೆ

Update: 2019-10-15 16:00 GMT

ಶ್ರೀನಗರ, ಅ.15: ಸರಕಾರದಿಂದ ಪ್ರಶಸ್ತಿ ಪಡೆದುಕೊಂಡಿದ್ದ ಕಾಶ್ಮೀರ ಮೂಲದ ಪತ್ರಕರ್ತನಿಗೆ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನಿರಾಕರಿಸಿದ ಘಟನೆ ಸೋಮವಾರ ಹೊಸದಿಲ್ಲಿಯಲ್ಲಿ ನಡೆದಿದೆ.

ಕಾಶ್ಮೀರಿ ಪತ್ರಕರ್ತ ಮತ್ತು ಮಾನವಹಕ್ಕುಗಳ ಹೋರಾಟಗಾರ ಬಿಲಾಲ್ ಭಟ್ ಸೋಮವಾರ ಮಲೇಶ್ಯಾಕ್ಕೆ ತೆರಳಲೆಂದು ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರನ್ನು ತಡೆದ ಅಲ್ಲಿನ ವಲಸೆ ಅಧಿಕಾರಿಗಳು ಭಟ್ ಅವರಿಗೆ ವಿದೇಶ ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭಟ್, “ಸೋಮವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ನಾನು ವಿಮಾನ ನಿಲ್ದಾಣ ತಲುಪಿದ್ದೆ. ಅಲ್ಲಿನ ವಲಸೆ ಅಧಿಕಾರಿಗಳು, ನೀನು ಕಾಶ್ಮೀರಿಯೇ ಎಂದು ನನ್ನನ್ನು ಪ್ರಶ್ನಿಸಿದ್ದರು ಹಾಗೂ ಪ್ರಯಾಣಕ್ಕೆ ಕಾರಣ ತಿಳಿಸುವಂತೆ ಸೂಚಿಸಿದ್ದರು. ಮಲೇಶ್ಯಾದ ಕಾಲೇಜಿನಲ್ಲಿ ದಾಖಲಾತಿ ಪಡೆಯಲು ತೆರಳುತ್ತಿರುವುದಾಗಿ ನಾನು ಸತ್ಯವನ್ನೇ ಹೇಳಿದೆ. ನಂತರ ಅಧಿಕಾರಿಗಳು ನನ್ನ ವಯಸ್ಸಿನ ದಾಖಲೆ ಕೇಳಿದರು ಮತ್ತು ನನ್ನ ವಾಹನ ಚಾಲಕನ ಪರವಾನಿಗೆ, ವೀಸಾ ಹಾಗೂ ಇತರ ದಾಖಲೆಗಳನ್ನು ಪಡೆದು ಹೊರಗೆ ಕಾಯುವಂತೆ ನನಗೆ ಸೂಚಿಸಿದ್ದರು. ರಾತ್ರಿ ಒಂದು ಗಂಟೆಯ ವರೆಗೆ ಕಾದ ನಂತರ ನನಗೆ ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಿಸಲಾಗಿದೆ” ಎಂದು ತಿಳಿಸಿದ್ದಾರೆ ಎಂದು ಅಸಮಾಧಾನ ತೋಡಿಕೊಂಡರು. ಯಾವ ಕಾರಣಕ್ಕಾಗಿ ನನ್ನನ್ನು ವಿದೇಶಕ್ಕೆ ಪ್ರಯಾಣಿಸದಂತೆ ತಡೆಯಲಾಗುತ್ತಿದೆ ಎಂಬ ಪ್ರಶ್ನೆಗೆ ಅಧಿಕಾರಿಗಳು ಯಾವುದೇ ಸಮರ್ಪಕ ಉತ್ತರ ನೀಡಿಲ್ಲ ಎಂದು ಭಟ್ ತಿಳಿಸಿದ್ದಾರೆ. ಕಳೆದ ತಿಂಗಳು ಚೆನ್ನೈಯಲ್ಲಿ ನಡೆದ ಅಂತರ್‌ರಾಷ್ಟ್ರೀಯ ಯುವ ವೇದಿಕೆ ಕಾರ್ಯಕ್ರಮದಲ್ಲಿ ಸಮರ್ಥನೀಯ ಅಭಿವೃದ್ಧಿ ಗುರಿಗಳ ಬಗ್ಗೆ ಮಾತನಾಡಲು 20 ದೇಶಗಳ 100ಕ್ಕೂ ಅಧಿಕ ನಿಯೋಗಗಳನ್ನು ಆಹ್ವಾನಿಸಿದ ಕಾರಣಕ್ಕೆ ಆರೋಗ್ಯ ಸಚಿವಾಲಯ ಭಟ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News